ರಷ್ಯನ್ ಸಾಹಿತ್ಯ -

 	ವಿಶ್ವಸಾಹಿತ್ಯದಲ್ಲಿ ಗಣ್ಯಸ್ಥಾನ ಗಳಿಸಿರುವ ರಷ್ಯನ್ ಸಾಹಿತ್ಯದ ಮೂಲ ಬಹು ಪ್ರಾಚೀನವಾದುದಾದರೂ ಇತಿಹಾಸದ ಕಕ್ಷೆಗೆ ಬಂದದು 10 ನೆಯ ಶತಮಾನದ ಕಡೆಯಲ್ಲಿ. 988 ರಲ್ಲಿ ಕೀವ್‍ನ ವ್ಲಾದಿಮಿರ್ ರಾಜಕುವರ ಕ್ರೈಸ್ತನಾದ ಬಳಿಕ ಬಿಜಾಂಟೀಯನ್ ಸಂಸ್ಕøತಿಯ ಪ್ರವೇಶಕ್ಕೆ ಬಾಗಿಲು ತೆರೆದಂತಾಯಿತು. ಕ್ರೈಸ್ತಮತ ಪ್ರಚಾರದೊಂದಿಗೆ ರಷ್ಯನ್ ಸಾಹಿತ್ಯದ ಉದಯವಾಯಿತು ಎನ್ನಬಹುದು. ರಾಜಧಾನಿ ಕೀವ್ ನಗರ ಸಾಹಿತ್ಯದ ಕೇಂದ್ರವಾಯಿತು. ಕ್ರೈಸ್ತಧರ್ಮದ ಸ್ಫೂರ್ತಿಯಿಂದ ಸ್ಲಾವಿಕ್‍ಭಾಷೆ ಅಭಿವೃದ್ಧಿಯಾಗತೊಡಗಿತು. ಧರ್ಮಪ್ರಚಾರಕರು ಪ್ರಾಂತಿಯ ಭಾಷೆಗೆ ಪ್ರೋತ್ಸಾಹ ಕೊಟ್ಟುದರಿಂದ ಪೂರ್ವ ಭಾಗದ ಸ್ಲಾವನಿಕ್ ಮೂಲದ ಭಾಷಾಪದ ಸಂಪತ್ತು, ಕಾಗುಣಿತ ಬಳಕೆಗೆ ಬಂದವು. ಅಸ್ತ್ರಮೀರ್ ಬೈಬಲ್ (1056-77) ದೊರೆತಿರುವ ಮೊದಲ ಗ್ರಂಥ. ಇದರ ಭಾಷೆಯೇ ಚರ್ಚ್-ಸ್ಲಾವನಿಕ್ ಭಾಷೆಗೆ ನಾಂದಿಯಾಯಿತು. ಸಾಹಿತ್ಯದ ಬರೆಹಗಳಿಗೆಲ್ಲ ಇದೇ ಬಳಕೆಯಾಗತೊಡಗಿತು. ಧಾರ್ಮಿಕ ಗ್ರಂಥಗಳು, ಪ್ರವಚಗಳು, ಧಾರ್ಮಿಕ ಬೋಧನೆಗಳು ಪ್ರಕಟವಾದವು. ದೇಸೀಭಾಷೆಯ ಬರೆಹಗಳಿದ್ದಿರಬಹುದಾದರೂ ಅಂತಹ ಗ್ರಂಥಗಳು ದೊರೆತಿಲ್ಲ. ಆದುದರಿಂದ ಆಡುಮಾತಿಗೂ ಚರ್ಚಿನ ಬಳಕೆಗೊಳಗಾದ ದೇಸಿ ಭಾಷೆಗೂ ಇದ್ದ ಅಂತರ ವ್ಯತ್ಯಾಸಗಳು ತಿಳಿದು ಬರುವುದಿಲ್ಲ.
  	11 ನೆಯ ಶತಕದ ಮಧ್ಯದಲ್ಲಿ ಕೀವ್ ನಗರದ ಇಲಾರಿಯೆನ್ ಎಂಬ ಪಾದ್ರಿ ಬರೆದ ಧರ್ಮಬೋಧಗಳ (ನೆರ್ಮನ್ಸ್) ಸಂಗ್ರಹ. 12 ನೆಯ ಶತಮಾನದಲ್ಲಿ ಪ್ರಕಟವಾದ ತುರೋಫ್‍ನ ಸಿರಿಲ್ ಎಂಬ ಪಾದ್ರಿ ಬರೆದ ಬೋಧನೋಪನ್ಯಾಸಗಳು-ಇವು ಧಾರ್ಮಿಕ ಸಾಹಿತ್ಯದ ಮೊದಲ ಕೃತಿಗಳು. ನೆಸ್ಟರ್ ಎಂಬ ಕ್ರೈಸ್ತ ಸಾಧು ಬರೆದ ಸಂತ ಗ್ಲೆಬ್ ಎಂಬನ ಜೀವನ ಚರಿತ್ರೆ ಇನ್ನೊಂದು ಮಹತ್ತ್ವದ ಮೈಲಿಗಲ್ಲು. ಕಾನ್ಸ್‍ಟಾಂಟಿನೋಪಲ್‍ನ ಜಾನ್ ಮಲಾಲಸ್ ಬರೆದ ಕ್ರಾನಿಕಲ್ಸ್ ನಿಂದ (ವೃತ್ತಾಂತ ಕಥನಗಳು) ಈ ಬಗೆಯ ಬರವಣಿಗೆ ಆರಂಭವಾಯಿತು. ನೋವಾನಿಂದ 1116ರ ವರೆಗಿನ ಮನುಕುಲದ ಕಥೆ ಪ್ರೈಮರಿ ಕ್ರಾನಿಕಲ್ ಎಂಬ ಹೆಸರಿನಲ್ಲಿ ಹೊರಬಂದಿತು. ಇದರ ಮುಂದಿನ ಕಾಲದ 1116-1200 ವರೆಗಿನ ಮನುಕುಲದ ವೃತ್ತಾಂತವನ್ನು ಕೀವ್‍ನ ಕ್ರಾನಿಕಲ್ ನಿರೂಪಿಸಿತು. ಇದರ ರಚನೆಯಲ್ಲಿ ನೆಸ್ಟರ್ ಶ್ರಮಿಸಿದ ಪ್ರಧಾನ ಸಂಪಾದಕನಾಗಿ ವ್ಯಾದುಬಿತ್ಸ್‍ಕಿಯ ಆ್ಯಬಟ್ ಸಿಲ್ವೆಸ್ಟರ್ ಕೆಲಸಮಾಡಿದ. ಈ ಗ್ರಂಥದಲ್ಲಿ ಹಲವು ಪ್ರಾಚೀನ ಸಂಪ್ರದಾಯಗಳೂ ವಿವಿಧ ಮೂಲಗಳಿಂದ ಸಂಗ್ರಹಿಸಿದ ಕಥೆಗಳೂ ನಿರೂಪಿತವಾಗಿವೆ. ಇದಲ್ಲದೆ ಕೋಡ್ ಆಫ್ ಯಾರೋಸ್ಲಾವ್‍ದ ಗ್ರೇಟ್ (1019-54), ಟೆಸ್ಟ್‍ಮೆಂಟ್ ಆಫ್ ವ್ಲಾದಿಮಿರ್ ಮನೊಮಾಖ್-ದ ಗ್ರಾಂಡ್ ಪ್ರಿನ್ಸ್ ಆಫ್ ಕೀವ್ (1113-25) ಎಂಬ ಇನ್ನೆರಡು ಗ್ರಂಥಗಳು ಗಮನ ಸೆಳೆಯುತ್ತವೆ. ವ್ಲಾದಿಮಿರ್ ಮನೋಮಾಖ್ ಸುಸಂಸ್ಕøತ ಸಾಹಿತಿ. ಈ ಪುಸ್ತಕಗಳಿಂದ ಕೀವ್ ರಾಜ್ಯದ ಸಂಸ್ಕøತಿ ಸಮಕಾಲೀನ ಐರೋಪ್ಯ ಸಂಸ್ಕøತಿಗಿಂತ ಬಹಳ ಉನ್ನತಮಟ್ಟದಲ್ಲಿತ್ತು ಎಂದು ತಿಳಿಯುತ್ತದೆ. ಕೀವ್‍ನ ನಾಯಕರಲ್ಲಿ ಮಾನವೀಯ ಸ್ವಂದನ ಇದ್ದುದು ಸುವ್ಯಕ್ತ. ಪಿಲ್‍ಗ್ರಿಮೇಜ್ ಆಫ್ ಡೇನಿಯಲ್ ದ ಆ್ಯಬಟ್ ಟು ದ ಹೋಲಿ ಲ್ಯಾಂಡ್ (1106-08) ಎಂಬ ಗ್ರಂಥ ಸೊಗಸಾದ ಪ್ರವಾಸ ಕಥನ. ಲೇಖಕನ ಉತ್ಕಟ ದೇಶಭಕ್ತಿ, ಫ್ರೆಂಚ್ ಆಡಳಿತದ ಪ್ಯಾಲಸ್ತೀನಿನ ಜನಜೀವನಚಿತ್ರ ಓದುಗರ ಮನಸ್ಸಿನಲ್ಲಿ ಉಳಿಯುತ್ತವೆ. ಷೆಟಿಷನ್ ಆಫ್ ಡೇನಿಯಲ್ ದ ಪ್ರಿಜ್ನರ್ ಎಂಬ ಗ್ರಂಥ 13 ನೆಯ ಶತಮಾನದ್ದು. ಇದರಲ್ಲಿ ಬೈಬಲ್‍ನ ಉದ್ಧøತ ವಾಕ್ಯಗಳು ಜನಪ್ರಿಯ ಗಾದೆಗಳು ತುಂಬಿವೆ. ಹೆಸಿಯಾಡ್ ಶೈಲಿಯಲ್ಲೇ ಬರೆದ ಕೃತಿ ಇದು. ಟೇಲ್ ಆಫ್ ದ ಆರ್ಮಮೆಂಟ್ ಆಫ್ ಇಗೋರ್ ಎಂಬೊಂದು ಮಹತ್ತ್ವದ ಕೃತಿ. 12 ನೆಯ ಶತಮಾನದ ಜೈತ್ರಯಾತ್ರೆಯ ಕಥನ. ಈ ಕಾಲದ ಲೌಕಿಕ ಗ್ರಂಥ ಇದೊಂದೇ. ಪ್ರಿನ್ ಇಗೋರ್ ಸ್ವೆತೊಸ್ಲಾವಿಚ್ ಎಂಬಾತ ಟಾರ್ಟರ್ ಜನಾಂಗದ ಮೇಲೆ ಮಾಡಿದ ಧಾಳಿ ಮತ್ತು ಸಮರ ವೃತ್ತಾಂತ ಇದರ ವಸ್ತು. ಯುದ್ಧದಲ್ಲಿ ಸೋತು ಸೆರೆ ಸಿಕ್ಕಿದ ರಾಜಕುಮಾರ ಸಾಹಸಗಳನ್ನೆಸಗಿ ತಪ್ಪಿಸಿಕೊಂಡು ಬರುತ್ತಾನೆ. ಒಳ್ಳೆಯ ವೀರ್ಯವತ್ತಾದ ಬರೆಹ, ಗದ್ಯವಾದರೂ ಕಾವ್ಯದ ಸೊಗಡಿದೆ. ಕ್ರೈಸ್ತ ಮತ್ತು ವೇಗನ್ ಸಂಸ್ಕøತಿಗಳು ಚಿತ್ರಣ ಸೊಗಸಾಗಿದೆ. ಇದು ಏಕವ್ಯಕ್ತಿ ಕೃತವೋ ಹಲವಾರು ವ್ಯಕ್ತಿಗಳು ರಚಿಸಿದ್ದೊ ಎಂಬ ಜಿಜ್ಞಾಸೆಯೀ ಇದೆ. ಈ ಕೃತಿ ಮಧ್ಯ ಯುರೋಪಿನ ಶ್ರೇಷ್ಠ ಸಾಹಿತ್ಯಕೃತಿಗಳಲ್ಲೊಂದೆಂದು ಪರಿಗಣಿತವಾಗಿದೆ. ಆ ಕಾಲದಲ್ಲಿ ಇದನ್ನು ಮೀರಿಸುವ ಮತ್ತೊಂದು ಕೃತಿ ಸಿಕ್ಕುವುದಿಲ್ಲ. ಧಾರ್ಮಿಕ ಖಂಡನೆಗೆ ಸಿಲುಕಿಯೊ ಟಾರ್ಟಾರರ ದಾಳಿಗೆ ತುತ್ತಾಗಿಯೊ ಇದರ ಪ್ರತಿಗಳು ಕಣ್ಮರೆಯಾದವು. 18 ನೆಯ ಶತಮಾನದಲ್ಲಿ ಒಂದು ಪ್ರತಿ ದೊರೆಯಿತು. 12 ನೆಯ ಶತಮಾನದ ಇತರ ಕೃತಿಗಳಲ್ಲಿ ದೊರೆಯುವ ಆ ಕಾಲದ ಜೀವನ ಚಿತ್ರಕ್ಕೂ ಇದರಲ್ಲಿ ಬರುವ ಚಿತ್ರಕ್ಕೂ ತುಂಬ ವ್ಯತ್ಯಾಸವನ್ನು ಕಾಣುವ ವಿಮರ್ಶಕರು ಇದೊಂದು ಪ್ರಕ್ಷಿಪ್ತ ಕೃತಿ ಇರಬಹುದು ಎಂದೂ ಶಂಕಿಸಿದ್ದಾರೆ. ಆದರೆ ಈ ಶಂಕೆಗೆ ಕಾರಣವಿಲ್ಲ ಎಂಬ ವಾದವೂ ಇದೆ.
  	ಕೀವ್ ಸಾಹಿತ್ಯಪಥ ಸುಗಮವಾಗಿರಲಿಲ್ಲ. 1170 ರಲ್ಲಿ ಸುಜ್ದಲ್‍ನ ಆಂದ್ರೇ ಬೊಗೊಲ್ಯುಬೆಸ್ಕಿ ಧಾಳಿಮಾಡಿ ಕೀವ್ ನಗರವನ್ನು ಹಾಳುಗೆಡಹಿದ. ಎಲ್ಲ ಪಂಡಿತರೂ ಸುಸಂಸ್ಕøತರೂ ಉತ್ತರ ಪ್ರಾಂತಕ್ಕೆ ಪಲಾಯನ ಮಾಡಿದರು. ರಷ್ಯನ್ ಸಾಹಿತ್ಯಕ್ಕೆ ಆ ಕಾಲದಿಂದ ಮಾಸ್ಕೋ ಕೇಂದ್ರವಾಯಿತು. ಕೀವ್ ಮತ್ತು ಸುತ್ತಣ ಪ್ರದೇಶ ಪೋಲೆಂಡ್, ಲಿಥುವೇನಿಯಗಳ ವಶವಾಯಿತು. ಉತ್ತರ ದಕ್ಷಿಣ ಸಾಂಸ್ಕøತಿಕ ಇತಿಹಾಸ ಸ್ಪಷ್ಟವಾಗಿ ಬೇರೆಯಾಯಿತು. ದಕ್ಷಿಣಪಥದ ಕತೆ ಉಕ್ರೇನಿನ ಇತಿಹಾಸದೊಳಗೆ ಸೇರಿತು.
  	1240 ರಲ್ಲಿ ಮಂಗೋಲರ ಅನಂತರ ಟಾರ್ಟಾರರ ಆಕ್ರಮಣಗಳಾಗಿ ಕೀವ್ ಮತ್ತಷ್ಟು ಹಾನಿಗೊಳಗಾಯಿತು. ಮಾಸ್ಕೋ ಕೂಡ ಶತ್ರುಗಳ ವಶವಾಯಿತು. ಪರಕೀಯರ ದಾಳಿಯನ್ನು ಉಗ್ರವಾಗಿ ಎದುರಿಸುತ್ತಿದ್ದ ಸೇಂಟ್ ಅಲೆಕ್ಸಾಂಡರ್ ನೆವೆಸ್ಕಿ ಕಡೆಗೆ ಚೆಂಗೇಸ್‍ಖಾನನ ಸಾಮಂತನಾದ. ಮಾಸ್ಕೋ ಮೇಲೆ ಕೆಲವು ಕಾಲ ಪೌರ್ವಾತ್ಯರ ಪ್ರಭಾವ ಬಿದ್ದಿತು. ಆದರೆ ಕ್ರಮೇಣ ಪುಣ್ಯ ಕ್ಷೇತ್ರವಾದ ಕಾನ್ಸ್‍ಟಾಂಟಿನೊಪಲ್‍ನ ಸಂಪರ್ಕ ಕಡಿದು, ಬಲ್ಗೇರಿಯದ ಕ್ರೈಸ್ತ ಸಾದುಗಳು ರಕ್ಷಿಸಿಟ್ಟುಕೊಂಡಿದ್ದ ಹಳೆಯ ಕೃತಿಗಳ ಹಸ್ತಪ್ರತಿಗಳನ್ನು ಪುನಃ ಮಾಸ್ಕೋಗೆ ತಂದಮೇಲೆ ಪಶ್ಚಿಮ ಯುರೋಪಿನ ಪ್ರಭಾವದ ಮಾಸ್ಕೋ ಸಂಸ್ಕøತಿ ಪರಿವರ್ತನೆಗೊಳ್ಳತೊಡಗಿತು. 1389 ರಲ್ಲಿ ಡಿಮಿಟ್ರಿಡಾನ್ ಸ್ಕಾಯ್ ಟಾರ್ಟಾರರನ್ನು ಕುಲಿಕೋವಾದಲ್ಲಿ ಸೋಲಿಸಿದ. ಅನಕ್ಷರಸ್ಥನರೂ ದೇಶೀಯ ಸಾಹಿತ್ಯಕ್ಕೆ ಪೋಷಣೆ ನೀಡಿದ. ಈ ಕಾಲದಲ್ಲಿ ಬಂದ ಕೃತಿಗಳಲ್ಲಿ ಹೆಚ್ಚಿನವು ಸಂತರ ಜೀವನಚರಿತ್ರೆಗಳು ; ಜನಪದ ಕಥಾ ಸಂಗ್ರಹಗಳು ಕೆಲವು ; ಇನ್ನು ಕೆಲವು ದೈವಶಾಸ್ತ್ರದ ಗ್ರಂಥಗಳು.
  	16 ನೆಯ ಶತಕದ ಮಾಸ್ಕೊ ಸಂಸ್ಕøತಿಯ ಪ್ರತೀಕವಾಗಿದ್ದವನು ನಾಲ್ಕನೆಯ ಜಾರ್ ಇವ್ಯಾನ್ (1530-84). ಪ್ರಿನ್ಸ್ ಆಂಡ್ರೆ ಮಿಹೈಯ್ಲೋವಿಚ್ ಕುರ್ಬಸ್ಕಿಗೆ ಈತ ಬರೆದ ಪತ್ರಗಳಲ್ಲಿ ಸಮಕಾಲೀನ ಇತಿಹಾಸ ದಾಖಲಾಗಿದೆ. ಬಿಜಾಂಟೀಯನ್ ಪರಂಪರೆಯ ಆಡಂಬರಯುಕ್ತ ಭಾಷಾಶೈಲಿ, ತಾನು ರಾಜವಂಶದವನೆಂಬ ಹೆಮ್ಮೆ , ಠೀವಿ, ಗತ್ತುಗಳು ಬಹು ಕುಶಲತೆಯಿಂದ ಕಲಾಪೂರ್ಣವಾಗಿ ಬರೆದಿರುವ ಈ ಪತ್ರಗಳಲ್ಲಿ ಕಾಣದೆ ಹೋಗುವುದಿಲ್ಲ. ಒಟ್ಟಿನಲ್ಲಿ ಇದು ಪರಿಣಾಮಕಾರಿಯಾದ ಬರವಣಿಗೆ. ಜಾರ್ ಇವ್ಯಾನ್ ಇದೇ ಕಾಲದಲ್ಲಿ ಮೊದಲ ಮುದ್ರಣಯಂತ್ರವನ್ನು ಸ್ಥಾಪಿಸಿದ.
  	ಪ್ರಿನ್ಸ್ ಕುರ್ಬಸ್ಕಿ ಬರೆದ ರಾಜ-ಆಸ್ಥಾನಿಕ ಪತ್ರ ವ್ಯವಹಾರ ಸಹ ಇಂಥದೇ ಇನ್ನೊಂದು ಪತ್ರ ಸಾಹಿತ್ಯವಾದರೂ ಜಾರ್ ಇವ್ಯಾನ್‍ನ ಕೃತಿಯ ಸಮಕ್ಕೆ ಇದು ಬರುವುದಿಲ್ಲ. ಇದರಲ್ಲಿ ಧರ್ಮ ಮತ್ತು ಪ್ರಭುತ್ವಗಳ ಪೋಷಣೆಗೆ ರಾಜನ ಕರ್ತವ್ಯ ಮತ್ತು ಅಧಿಕಾರಗಳೇನು, ಪ್ರಜೆಗಳ ಕರ್ತವ್ಯ ಮತ್ತು ಸೇವೆಗಳೇನು ಎಂಬುದರ ವಿವರಗಳಿವೆ. ಇದೇ ಲೇಖಕನ ಇನ್ನೊಂದು ಕೃತಿ `ರಷ್ಯ ಇತಿಹಾಸ ಇದರಲ್ಲಿ eóÁರ್ ಇವ್ಯಾನ್‍ನ ನೀತಿ ಧೋರಣೆಗಳನ್ನು ಖಂಡಿಸಲಾಗಿದೆ.
  	ಸಿಲ್ವಿಸ್ಟರ್ ಎಂಬ ಪಾದ್ರಿಯ ದೂಮ್‍ಸ್ತ್ರಾಯ್ ಎಂಬ ಗ್ರಂಥ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಪ್ರಸ್ತಾಪಿಸುತ್ತದೆ. ಮಹಾಪರಿವರ್ತನೆಗೆ ಮುಂದಿನ ರಷ್ಯದ ಶಿಷ್ಟಾಚಾರ ಇದರಲ್ಲಿ ಪ್ರತಿಬಿಂಬಿತವಾಗಿದೆ. ಸಾಹಿತ್ಯ ದೃಷ್ಟಿಯಿಂದ ಇದೊಂದು ಸಾಧಾರಣ ಕೃತಿ.
  	17 ನೆಯ ಶತಮಾನದಲ್ಲಿ ದೇಶಾದ್ಯಂತ ಪ್ರಕ್ಷುಬ್ದ ಸ್ಥಿತಿ ಇತ್ತು. ಹಳೆಯ ರಾಜಮನೆತನ ಹೋಗಿ ರಾಜ್ಯದ ಬಹುಭಾಗ ಪೋಲೆಂಡ್ ರಾಜನ ಅಧೀನವಾಯಿತು. ಕ್ರೆಮ್ಲಿನ್‍ವರೆಗೂ ಪೋಲಿಷ್ ಸೇನೆ ಆಕ್ರಮಿಸಿ ಆಳತೊಡಗಿತು. ಇದರ ಪರಿಣಾಮವಾಗಿ ರಷ್ಯಕ್ಕೆ ಪಾಶ್ಚಾತ್ಯ ಜಗತ್ತಿನ ಸಂಪರ್ಕ ಹೆಚ್ಚಾಯಿತು. ರೋಮನೊವ್ ರಜನು ಅಧಿಕಾರಕ್ಕೆ ಬರುವವರೆಗೂ ಈ ಅಭಾವ ಬಲವಾಗಿತ್ತು. ಈ ಕಾಲದ ಒಂದು ಗಮನಾರ್ಹ ಕೃತಿ ಅವ್ವಕುಮ್‍ನ (1620-81) ಆತ್ಮಕಥೆ. ಜಾರ್ ಅಲೆಕ್ಸಿ ಆಗಿನ ದೊರೆ. ಅವ್ವಕುಮ್ ಸಂಪ್ರದಾಯವಾದಿ ಎಂಬುದು ಕೃತಿಯಲ್ಲಿ ಸುವ್ಯಕ್ತವಾಗಿದೆ. ಚರ್ಚ್ ವಿವಾದದಲ್ಲಿ ಈತ ಮಂದಗಾಮಿಗಳ ನಾಯಕ. ತನ್ನ ಬಾಳಿನ ಕಷ್ಟನಷ್ಟ ಹೋರಾಟಗಳನ್ನು ವಷ್ತುನಿಷ್ಠವಾಗಿ ಬರೆದುದು ಈ ಕೃತಿಯ ಒಂದು ವಿಶೇಷ ; ಆಡುಮಾತು ಬಳಸಿದುದು ಇನ್ನೊಂದು ವಿಶೇಷ.
  	ಯುರೋಪಿನ ಮಿರಾಕಲ್ ನಾಟಕ ಮಾದರಿಯ ನಾಟಕಗಳು ಪ್ರಥಮ ಪ್ರಯೋಗ ಅಲ್ಲಲ್ಲಿ ನಡೆಯಿತು. ಜನಪದಗೀತೆಗಳು ವಿಪುಲವಾಗಿದ್ದುವು. ಆದರೆ ಅವುಗಳ ಸಂಗ್ರಹ ಸಂಪಾದನೆಗಳ ಕೆಲಸ ಆಗಲು ಇನ್ನೊಂದು ಶತಮಾನವೇ ಬೇಕಾಯಿತು. ಬೈಲಿನಿ ಅಥವಾ ಸ್ಟಾರನಿ ಎಂಬ ಗೀತೆಗಳಿಗೆ ಫೇರ್‍ಸನ್ ವ್ಲಾದಿಮಿರ್ ಮತ್ತು ಅವನ ದರ್ಬಾರಿನ ಕಥೆಗಳೇ ವಸ್ತು. ಮ್ಯೂರೋ, ಮನ್ ಹಳೆಯ ಕೋಸ್ಯಾಕ್ ಇಲ್ಯಾನ್ ಕಥೆಗಳೂ ಸೇರಿದಂತೆ ಈಎಲ್ಲ ಕಥೆಗಳು ಕೀವ್ ಮೂಲದಿಂದ ಬಂದವುಗಳು. ಟಾರ್ಟಾರ್‍ರ ಧಾಳಿಗೆ ಮುಂಚಿನ ಜೀವನವನ್ನು ಇವು ಚಿತ್ರಿಸುತ್ತವೆ. ಮಾಸ್ಕೋ ನಗರದ ಪ್ರಸ್ತಾಪ ಸಹ ಇಲ್ಲಿಲ್ಲ. ಇವು ಹಳೆಯ ಕಥೆಗಳೋ ಇಲ್ಲವೇ ಹಳೆಯ ಮಾದರಿಯಲ್ಲಿ ರಚಿತವಾದ ಈಚಿನ ಬರಹೆಗಳೂ ಎಂಬುದು ವಿವಾದಗ್ರಸ್ತವಿಚಾರ. ಐತಿಹಾಸಿಕ ಲಾವಣಿ ಪದಗಳೊಂದಿಗೆ ಈ ಗೀತೆಗಳು ಬೆರೆತುಹೋಗಿವೆ. ಇವ್ಯಾನ್‍ದ ಟೆರಿಬಲ್‍ನ ಕಾಲದ ಘಟನೆಗಳ ನೆನಪೂ ಇಲ್ಲಿದೆ. ಇವ್ಯಾನ್‍ನನ್ನು ಮೆಚ್ಚಿ ಪೀಟರ್ ದ ಗ್ರೇಟ್‍ನನ್ನು ವಿರೋಧಿಸಿ ಬರೆದ ಗೀತೆಗಳೂ ಇವೆ. ದಂತಕಥೆಗಳು, ಮಂತ್ರ, ತಂತ್ರ ಇಂದ್ರಜಾಲ ಕಥೆಗಳು, ಕುರುಡ ಭಿಕ್ಷುಕರ ಧಾರ್ಮಿಕ ಗೀತೆಗಳು-ಹೀಗೆ ಹಲವಾರು ಬಗೆಯ ಬರಹೆಗಳನ್ನು ಇವುಗಳಲ್ಲಿ ಕಾಣಬಹುದು. ಹೊಸ ಸಾಹಿತ್ಯ ಉದಯವಾದ ಮೇಲೂ ಈ ಹಳೆಯ ಕಥೆಗಳ ಬಗ್ಗೆ ಕೃಷಿಕರಿಗೆ ಇದ್ದ ಅಕ್ಕರೆ ತಗ್ಗಲಿಲ್ಲ.
ಹೊಸಸಾಹಿತ್ಯ ಪೀಟರ್ ದ ಗ್ರೇಟ್‍ನ (1672-1725) ಪ್ರಯತ್ನದ ಫಲ. ಪಾಶ್ಚಾತ್ಯೀಕರಣ ಸುಧಾರಣೆ ಆತನ ಧೋರಣೆಗಳು. ಈ ಸುಧಾರಣೆಯ ಮಾಧ್ಯಮವಾಗಿ ಮಾತ್ರ ಸಾಹಿತ್ಯ ಆತನಿಗೆ ಮಾನ್ಯವಾಗಿತ್ತು. ಪಾಶ್ಚಾತ್ಯ ಮಾದರಿಯಲ್ಲಿ ಸೇನೆಗೆ ತರಬೇತಿ ಹಾಗೂ ಸೇನಾರಚನೆಗಳನ್ನು ಜಾರಿಗೆ ತಂದ. ಸೇಂಟ್ ಪೀಟರ್ಸ್‍ಬರ್ಗ್ ಪಶ್ಚಿಮ ಭಾಗದ ರಾಜಧಾನಿಯಾಗಿ ನಿರ್ಮಾಣಗೊಂಡಿತು. ಚರ್ಚಿನ ಅಧಿಕಾರವನ್ನು ಮೊಟಕುಮಾಡಿದುದು, ಆರ್ಥಿಕ ಸುಧಾರಣೆ, ಪಾಶ್ಚಾತ್ಯ ಮಾದರಿಯ ಉಡುಗೆ ತೊಡುಗೆಗಳನ್ನು ರೂಢಿಗೆ ತಂದುದು ಇವೆ ಮುಂತಾದವು ಪೀಟರ್ಸ್ ದೊರೆ ಕೈಗೊಂಡ ಕಾರ್ಯಗಳು. ಹೀಗಾಗಿ ಅನಂತರ ಬಂದ ಸಾಹಿತ್ಯವೆಲ್ಲ ಪಾಶ್ಚಿತ್ಯ ಮಾದರಿಯನ್ನೇ ಅನುಸರಿಸಿತು. ಚರ್ಚ್ ಸ್ಲಾವನಿಕ್ ಆಡಂಬರದ ಆಲಂಕಾರಿಕ ಭಾಷೆಯನ್ನೇನೊ ಸರಳಗೊಳಿಸಿದರು. ಪಶ್ಚಿಪದ ಕಡೆಯ ಗವಾಕ್ಷ ತೆರೆದಂತಾಗಿ ಪಾಶ್ಚಿಮಾತ್ಯ ಗಾಳಿ ಬೀಸಿತು.
	18ನೆಯ ಶತಮಾನದ ರಷ್ಯನ್ ಸಾಹಿತ್ಯ ಒಂದು ವಿಚಿತ್ರವಾದ ಘಟನೆ. ಕೆಲವು ಕಾಲ 19ನೆಯ ಶತಕದ ವಿಮರ್ಶಕರು ಈ ಕಾಲದ ಬರೆಹಗಳನ್ನು ಸಪ್ಪೆ, ಫ್ರೆಂಚ್‍ನ ಹುಸಿ ಕ್ಲಾಸಿಸಿಸಮ್‍ನ ಅದ್ದೂರಿ ಅನುಕರಣೆ ಎಂದು ಮೂಗು ಮುರಿದರು. ರೂಪ ಕೃತಕವಾದರೂ ಒಳಗಿನ ಸತ್ತ್ವ-ಚೈತನ್ಯಪೂರ್ಣವೆಂದು ಮೆಚ್ಚುವ ಅಭಿಪ್ರಾಯಗಳೂ ಕ್ರಮೇಣ ಬೆಳೆದವು. ಸಾಹಿತಿಗಳಿಗೆ ಗೌರವ ಮನ್ನಣೆಗಳೂ ಒಳ್ಳೆಯ ಸಂಭಾವನೆಯೂ ದೊರೆತವು. ಗೌರ್ನರ್ ಹುದ್ದೆಗೂ ನೇಮಕವಾಗುವಷ್ಟು ಕವಿಗಳಿಗೆ ಮಾನ್ಯತೆ ಬಂದಿತು. ಆಳುವವರನ್ನು ಪ್ರಶಂಸಿಸುವ ಕಾವ್ಯ ಒಂದು ಕಡೆ, ಸಾಮಾಜಿಕ ಲೋಪದೋಷಗಳ ಬಗ್ಗೆ ವಿಡಂಬನ ಕಾವ್ಯ ಇನ್ನೊಂದು ಕಡೆ-ಇವೇ ಈ ಕಾಲದ ಸಾಹಿತ್ಯದ ಪ್ರಧಾನ ಲಕ್ಷಣ.
	ಪ್ರಿನ್ಸ್ ಆಂತಿಯೋಕ್ ಕಾಂತೆಮಿರ್ (1708-44) ಹೊಸ ಸಾಹಿತ್ಯದ ಮೊದಲಿಗ. ಫ್ರೆಂಚ್ ಮತ್ತು ಪೋಲಿಷ್ ಮಾದರಿಯ ಛಂದಸ್ಸನ್ನು ಬಳಸಿ ಕಾವ್ಯ ಬರೆದ. ವಾಸಿಲಿ ಕಿರಿಲೋವಿಜ್ ತ್ರಿಜ್ಯಕೋವ್‍ಸ್ಕಿ (1703-69) ಈ ಛಂದಸ್ಸನ್ನು ಸೂಕ್ತವಾಗಿ ಸುಧಾರಿಸಿ ಉತ್ತಮಗೊಳಿಸಿ ಕಾವ್ಯರಚನೆ ಮಾಡಿದ. ಈತ ರಷ್ಯದ ಪ್ರಥಮ ಮಾನವತಾವಾದಿ ವಿಮರ್ಶಕ. ಆದರೂ ಅನೇಕರ ಟೀಕೆಗೆ ಗುರಿಯಾದ. ಮಿಹೈಲೋ ವಸಿಲ್ಯೇವಿಚ್ ಲಮಸೊಸೊಫ್ (1708/15-765) ಆಧುನಿಕ ರಷ್ಯನ್ ಸಾಹಿತ್ಯದ ಪಿತಾಮಹ ಎಂದು ಹೇಳಬಹುದು. ಈತ ಒಬ್ಬ ಅಸಾಧಾರಣ ಮೇಧಾವಿ. ವಿಜ್ಞಾನದ ಎಲ್ಲ ಭಾಗಗಳಲ್ಲೂ ಪ್ರಕಾಂಡ ಪಂಡಿತ. ಚಲಿಸುವ ವಿಶ್ವಕೋಶ ಎಂಬ ಖ್ಯಾತಿಯನ್ನು ಪಡೆದಿದ್ದ. ಜರ್ಮನಿಯಲ್ಲಿ ಭೌತಶಾಸ್ತ್ರದ ವಿಶೇಷ ಅಧ್ಯಯನ ಮಾಡಿದ್ದ. ವಿಜ್ಞಾನ ಅಕಾಡೆಮಿಯಲ್ಲಿ ರಸಾಯನಶಾಸ್ತ್ರದ ಉಪಪ್ರಾಧ್ಯಾಪಕನಾಗಿದ್ದ. ರಷ್ಯನ್ ವ್ಯಾಕರಣವನ್ನು ನಿಯಮಗೊಳಿಸಿದ. ಈತ ರಚಿಸಿದ ಓಡ್ ಆನ್ ದ ಕ್ಯಾಪ್ಚರ್ ಆಫ್ ಖೋಟಿನ್ (1739) ಒಂದು ವಿಶಿಷ್ಟ ಕಾವ್ಯಮಾದರಿಯಾಯಿತು. ಮೆಡಿಟೇಷನ್ಸ್ ಆನ್ ದ ಡಿವೈನ್ ಮೆಜೆಸ್ಟಿ ಮತ್ತು ಬೈಬಲ್‍ನ ಹಳೆಯ ಒಡಂಬಡಿಕೆಯ ಅನುವಾದ ಎರಡೂ ಶ್ರೇಷ್ಠಸಾಹಿತ್ಯ ಕೃತಿಗಳೆನಿಸಿದವು. ಈತನ ಚಿಂತನ ಬರೆಹಗಳಿಂದ ರಷ್ಯನ್ ಸಾಹಿತ್ಯಕ್ಕೆ ಹೊಸ ಚೇತನ ಬಂದಿತು. ಅಂದಿನಿಂದ ವೈಚಾರಿಕತೆಯ ಹೊಸ ಗಾಳಿ ಬೀಸತೊಡಗಿತು.
	ಅಲೆಕ್ಸಾಂಡರ್ ಪೆತ್ರೊವಿಚ್ ಸುಮರೊಕೊವ್ (1717-74) ಇನ್ನೊಬ್ಬ ಸಾಹಿತ್ಯಪಥ ನಿರ್ಮಾಪಕ. ಈತನ ನಾಟಕಗಳು ಬಹಳ ಯಶಸ್ವಿಯಾಗಿ ಪ್ರಖ್ಯಾತವಾದವು. ಆಳುವವರ ನೀತಿಗೆಟ್ಟ ನಡತೆ, ದುಶ್ಚಟ, ದೌರ್ಬಲ್ಯಗಳನ್ನು ವಿಡಂಬಿಸುವ ಕೃತಿಗಳಿಂದ ಈತ ಹೆಸರಾದ.
	ಕ್ಯಾಥರಿನ್ ಮಹಾರಾಣಿಯ ಕಾಲದಲ್ಲಿ (1729-96) ಸಾಹಿತ್ಯಕ್ಕೊಂದು ಹೊಸ ತಿರುವು ದೊರಕಿತು. ಪೀಟರ್ ದೊರೆ ಪಾಶ್ಚಾತ್ಯ ಮಾದರಿಯ ದೇಹವನ್ನು ಸಿದ್ಧಪಡಿಸಿದ; ಕ್ಯಾಥರಿನ್ ರಾಣಿ ಅದಕ್ಕೆ ಜೀವ, ಆತ್ಮಗಳನ್ನು ತುಂಬಿದಳು. ಈಕೆ ಜರ್ಮನಿಯ ರಾಜಕುವರಿ. ರಷ್ಯದ ಮಹಾರಾಣಿಯಾದ ಮೇಲೆ ಅಲ್ಲಿನ ಸಾಹಿತ್ಯ-ಸಂಸ್ಕøತಿಗಳ ಏಳಿಗೆಗೆ ಗಮನವಿತ್ತಳು. ಫ್ರೆಂಚ್ ಲೇಖಕ ವಾಲ್ಟೇರ್ ಮತ್ತು ಇತರ ವಿದ್ವಾಂಸರುಗಳನ್ನು ಆದರಿಂದ ಆಹ್ವಾನಿಸಿ ಬಹುಮಾನ ಮನ್ನಣೆಗಳನ್ನು ನೀಡಿದಳು. ಪಾಶ್ಚಾತ್ಯ ಮಾದರಿಯ ಸಾಹಿತ್ಯದ ಉತ್ಕರ್ಷಕ್ಕೆ ಈಕೆ ಕಾರಣವಾದಳು.
	ಡೆನಿಸ್ ಇವ್ಯಾನೊವಿಚ್ ಫಾನ್ ವಿಜಿನ್‍ನ (1744-92) ದ ಬ್ರಿಗೇಡಿಯರ್. ಅನ್‍ಲಿಕ್ಡ್ ಕಬ್ ಎಂಬ ಹರ್ಷಕಗಳಲ್ಲಿ ಜನಜೀವನದ ನೋಟ ಸುಸ್ಪಷ್ಟವಾಗಿ ಮೂಡಿದೆ. ನಾಟಕದ ಭಾಷೆ ಸಮರ್ಥವಾಗಿದೆ. ಹಾಗೆಯೇ ಗಾವ್ರಿಲಾ ರಮೊನೊವಿಚ್ ದೆರ್ಷಾವಿನ್‍ನ (1743-1816) ಕವನಗಳು ಬದುಕಿಗೆ ಹತ್ತಿರವಾಗಿವೆ. ನಿಕಲಾಯ್ ಇವಾನೊವಿಚ್ ನೆವಿಕೋವ್ (1744-1816) ಎಂಬ ವಿಡಂಬನಕಾರ ಪತ್ರಿಕೆಯೊಂದರ ಸಂಪಾದಕನಾಗಿದ್ದ. ವಾಲ್ಟೇರನ ಸಂದೇಹ ವಾದವನ್ನು ಹಾಸ್ಯ ಮಾಡಿ ರಾಣಿಯ ಆಗ್ರಹಕ್ಕೆ ಗುರಿಯಾದ. ಈ ಕಾಲದ ಇನ್ನೊಂದು ಗಮನಾರ್ಹವಾದ ಕೃತಿ ಅಲೆಕ್ಸಾಂಡರ್ ನಿಕೊಲಾಯ್‍ವಿಚ್ ರಾದಿಷೇವ್‍ನ (1748-1802) ಜರ್ನಿಫ್ರಮ್ ಪೀಟರ್ಸ್‍ಬರ್ಗ್ ಟು ಮಾಸ್ಕೊ ಎಂಬ ಗ್ರಂಥ. ಇದರಲ್ಲಿ ಜೀತದಾಳುಗಳದು ಸ್ಥಿತಿಯ ನೈಜ ಚಿತ್ರಣ ಮತ್ತು ಈ ಪದ್ಧತಿಯನ್ನು ಉಗ್ರವಾಗಿ ಖಂಡಿಸುವ ವಿಚಾರಧಾರೆಗಳನ್ನು ಕಾಣಬಹುದು.
	18ನೆಯ ಶತಮಾನದ ತಿರುವಿನಲ್ಲಿ ಜನತೆಯ ಅಭಿರುಚಿಗಳಲ್ಲಿ ಸಾಕಷ್ಟು ಬದಲಾವಣೆಗಳು ಆದುವು. ಆಧುನಿಕ ರಷ್ಯನ್ ಸಾಹಿತ್ಯ ರೂಪುಗೊಳ್ಳಲು ಆರಂಭವಾಯಿತು. ಇಂಗ್ಲಿಷ್ ಭಾವುಕ ಕಾದಂಬರಿಗಳ ಅನುಕರಣ ಕಾಣಿಸತೊಡಗಿತು. ಫ್ರೆಂಚ್ ಕ್ರಾಂತಿಯನ್ನು ಪ್ರತ್ಯಕ್ಷ ಕಂಡು ಭ್ರಮನಿರಸನಗೊಂಡನಿಕಲಾಯ್ ಮಿಹೈಲೊವಿಚ್ ಕರಮ್‍ಜಿನ್‍ನ (1766-1826) ಮುಕ್ತಬರೆಹಗಳು. ಲೆಟರ್ಸ್ ಆಫ್ ಎ ರಷ್ಯನ್ ಟ್ರಾವೆಲರ್, ಪೂರ್‍ಲಿಜಾ ಎಂಬ ಕಾದಂಬರಿ ಬಹಳ ಜನಪ್ರಿಯವಾದವು. ಅನಂತರ ಈತ ಐತಿಹಾಸಿಕ ವಸ್ತುಗಳ ಕಡೆ ಗಮನಹರಿಸಿದ. ಮಾರ್ಫಾದ ಮೇಯರ್ಸ್ ವೈಫ್‍ನಲ್ಲಿ `ಅನಾಗರಿಕರು ಅಂಕೆಯಿಲ್ಲದ ಸ್ವಾತಂತ್ರವನ್ನು ಪ್ರೀತಿಸುತ್ತಾರೆ. ನಾಗರಿಕರು ಸುವ್ಯವಸ್ಥೆಯನ್ನು ಪ್ರೀತಿಸುತ್ತಾರೆ. ಅಂತಹ ಸುವ್ಯವಸ್ಥೆ ನಿರಂಕುಶಾಡಳಿತದಲ್ಲಿ ಮಾತ್ರ ಸಾಧ್ಯ ಎಂಬ ಮಹಾವಾಕ್ಯ ಬರುತ್ತದೆ. ಈತ ರಷ್ಯದ ಇತಿಹಾಸವನ್ನು 8 ಸಂಪುಟಗಳಲ್ಲಿ ಬರೆದ. ಈತನ ಗದ್ಯ ಸೊಗಸಾದುದು. ಅನಂತರದ ಪೀಳಿಗೆಯವರಿಗೆ ಇದು ಮಾದರಿಯಾಯಿತು. ಇವಾನ್ ಆಂದ್ರಯೇವಿಚ್ ಕ್ರಿಲೋಫ್ (1763-1844) ಶ್ರೇಷ್ಠ ಫೇಬಲ್ಸ್ ಲೇಖಕ. ಈತ ಸುಮಾರು 200 ಫೇಬಲ್ಸ್ ಬರೆದಿದ್ದಾನೆ. ಇವಕ್ಕೆ ನಿರೀಕ್ಷೆಗೂ ಮೀರಿ ಕೀರ್ತಿ ಬಂದಿತು. ಸಮಾಜದ ಎಲ್ಲ ವರ್ಗದವರಿಗೂ ಈ ಕಥೆಗಳು ಹಿಡಿಸಿದವು. ಮನಸೆಳೆಯುವ ಕಥನಶೈಲಿ. ನವುರಾದ ಹಾಸ್ಯ ಈತನ ಜನಪ್ರಿಯತೆಗೆ ಕಾರಣ. ರಷ್ಯದ ವಿಶಿಷ್ಟ ಸಂಸ್ಕøತಿಯ ಪ್ರತೀಕವಾಗಿದ್ದ ಈತನ ಪ್ರಖ್ಯಾತಿ ನಿಷ್ಠುರ ವಿಮರ್ಶಾ ಪ್ರಹಾರಗಳನ್ನು ಲೆಕ್ಕಿಸದೆ ಇಂದಿಗೂ ಮಂಕಾಗದೆ ಉಳಿದಿದೆ.
	19ನೆಯ ಶತಕದ ಆದಿಯಲ್ಲಿ ವ್ಯಾಸಿಲಿ ಆಂದ್ರೆವಿಚ್ ಜುಕೊವ್‍ಸ್ಕಿಯ (1782-1852) ಬರೆಹಗಳ ಮೂಲಕ ರಮ್ಯ ಸಾಹಿತ್ಯದ ಗಾಳಿ ಬೀಸಿತು. `ಈತ ಕ್ಯಾಥರಿನ್ ಮಹಾರಾಣಿಯ ಸಾಹಿತ್ಯ ಸಲಹೆಗಾರನಾಗಿದ್ದ. ಒಂದನೆಯ ಜಾರ್ ನಿಕೊಲಸ್‍ನ ಮಕ್ಕಳಿಗೆ ಗುರುವಾಗಿದ್ದ. ಬೈರನ್, ಸ್ಕಾಟ್, ಗಯಟೆ, ಷಿಲ್ಲರ್ ಮುಂತಾದವರ ಕೃತಿಗಳ ಪ್ರಭಾವ ಇವನ ಮೂಲಕ ರಷ್ಯನ್ ಸಾಹಿತ್ಯದ ಮೇಲೆ ಬಿದ್ದಿತು. ಈ ಕಾಲ ರಷ್ಯನ್ ಸಾಹಿತ್ಯದ ಸುವರ್ಣಕಾಲ. ಆಗಿನ ಎಲ್ಲ ಕವಿಗಳಿಗೂ ಈತನೆ ಸ್ಫೂರ್ತಿಯಾಗಿದ್ದ; ಮಾರ್ಗದರ್ಶನ ನೀಡಿದ; ಎಲ್ಲರ ಮೆಚ್ಚುಗೆಗೂ ಪಾತ್ರನಾದ. ಕೆಲವು ಶ್ರೇಷ್ಠ ಇಂಗ್ಲಿಷ್, ಗ್ರೀಕ್, ಪರ್ಷಿಯನ್ ಮತ್ತು ಭಾರತೀಯ ಸಾಹಿತ್ಯ ಕೃತಿಗಳನ್ನು ರಷ್ಯನ್‍ಗೆ ಸೊಗಸಾಗಿ ಭಾಷಾಂತರಿಸಿದ. ಈ ಅನುವಾದಗಳು ಶ್ರೇಷ್ಠ ಅನುವಾದಗಳಾಗಿವೆ.
	19ನೆಯ ಶತಕದ ಎಲ್ಲ ಯಶಸ್ವಿ ಬರಹಗಾರರೂ ಶ್ರೀಮಂತ ಮನೆತನಗಳ, ಉದಾರವಿಚಾರ ದೃಷ್ಟಿಯ ವ್ಯಕ್ತಿಗಳು, ಸಾಹಿತ್ಯ ಇವರ ಹವ್ಯಾಸ, ಕುಲ, ಅಂತಸ್ತುಗಳಿಲ್ಲದ ವೃತ್ತಿಸಾಹಿತಿಗಳನ್ನು ತಿರಸ್ಕಾರವಾಗಿ ಕಾಣುತ್ತಿದ್ದ ಕಾಲವದು. ಅಲೆಗ್ಸಾಂಡರ್ ಸಿರ್ಗೆಯೆವಿಚ್ ಗ್ರಿಬಯೆದೊಫ್ (1795-1829) ಒಬ್ಬ ಕುಲೀನ ಸಾಹಿತಿ. ಬಹುಕಾಲ ಪ್ರಾಚ್ಯ ರಾಷ್ಟ್ರಗಳಲ್ಲಿದ್ದ. ಈತ ಟೆಹ್ರಾನ್‍ನಲ್ಲಿ ರಷ್ಯದ ರಾಯಭಾರಿಯಾಗಿದ್ದಾಗ ಪಾರ್ಸಿ ಗುಂಪುಘರ್ಷಣೆ ಯೊಂದರಲ್ಲಿ ಸಿಕ್ಕು ಹತನಾದ. ಈತನ ಗೋರೆ ಆತ್ ಊಮ ಎಂಬ ವೈನೋದಿಕ ರಂಗದಮೇಲೆ ಇಂದಿಗೂ ಮನಸೆಳೆಯುವ ಸೊಗಸಾದ ನಾಟಕ. ಮೇಲುವರ್ಗದವರ ಪೊಳ್ಳುತನವನ್ನು ಇದು ವಿಡಂಬಿಸುತ್ತದೆ. ಚತುರ ಸಂಭಾಷಣೆಗೆ ಹೆಸರಾದುದು. eóÁರ್ ದೊರೆ ಇದರ ಪ್ರದರ್ಶನವನ್ನು ನಿಷೇಧಿಸಿದ್ದ.
	eóÁರ್ ಅಲೆಕ್ಸಾಂಡರ್ ಕುಲೀಣರಾದವರಿಗೆ ಮತ್ತು ಸರ್ಕಾರದ ಉನ್ನತಾಧಿಕಾರಿಗಳ ಮಕ್ಕಳಿಗೆಂದೇ ಸ್ಥಾಪಿಸಿದ ಲೈಸಿ ಅತ್ ಸಾರ್‍ಸ್ಕೊಯೆ ಸೇಲೊ ಎಂಬ ತರಬೇತಿ ಶಾಲೆ ಸಾಹಿತ್ಯಾಧ್ಯಯನದ ಅಧ್ಯಾಪಕನಾಗಿದ್ದ. ರಷ್ಯದ ಶ್ರೇಷ್ಠ ಕವಿಯೆನಿಸಿದ ಅಲಗ್ಸಾಂಡರ್ ಸಿರ್ಗೆಯೆವಿಚ್ ಪುಷ್ಕಿನ್ (1799-1837) ಈ ಶಾಲೆಯ ವಿದ್ಯಾರ್ಥಿ. ಅನಾಕ್ರಿಯಾಂಟಿಕ್ ಶೈಲಿಯ ಕವನ ರಚನೆಯಲ್ಲಿ ಪುಷ್ಕಿನ್ ಪ್ರಸಿದ್ಧಿ ಪಡೆದ. ರಾಜನ ಆತಳಿತವನ್ನು ಕುರಿತು ಚುರುಕಿನ, ಖಾರದ ಚುಟುಕಗಳನ್ನು ಬರೆದು ರಾಜಾಗ್ರಹಕ್ಕೆ ಗುರಿಯಾಗಿ ಕಪ್ಪುಸಮುದ್ರದ ಪ್ರದೇಶಕ್ಕೆ ಗಡಿಪಾರಾದ. ಡಿಸೆಂಬರ್ ಪಂಥದವರ ಒಳಸಂಚಿನಲ್ಲಿ ಈತನೂ ಬಹುಮಟ್ಟಿಗೆ ಸೇರಿ ಕೊಂಡಿದ್ದ. ಒಂದನೆಯ ನಿಕಲಸ್ ಕ್ಷಮಾದಾನಮಾಡಿ ರಾಜಧಾನಿಯಲ್ಲಿ ಬಂಗಾರದ ಸಂಕೋಲೆಗಳಲ್ಲಿ ಇವನನ್ನು ಬಂಧಿಸಿಟ್ಟಿದ್ದ ಈತನ ಕೃತಿಗಳಲ್ಲಿ ರುಸ್ಲಾನ್ ಅಂಡ್ ಲ್ಯೂದ್‍ಮಿಲಾ 'ಪ್ರೇಮ ಮತ್ತು ಮಾಂತ್ರಿಕ ಶಕ್ತಿಯ ಕಥಾ ವಸ್ತುಗುಳ್ಳ ರಮ್ಯ ಸಂಪ್ರದಾಯದ ಕವನ ಪ್ರಿಜ್ನರ್ ಆಫ್ ದ ಕಾಕಸಸ್ ದ ಫೌಂಟನ್ ಆಫ್ ಬಾಹ್ ಪಿಸರಾಯ್‍ಗಳಲ್ಲದೆ ಜಿಪ್ಸೀಸ್ ನಂತಹ ಬೈರನ್ ಕವನ ಮಾದರಿಯ ಪದ್ಯಗಳು ಪೀಟರ್ ದೊರೆಯನ್ನು ಮಹಾಪುರಷನನ್ನಾಗಿ ಚಿತ್ರಿಸಿರುವ ಮೊಲ್ಟಾವಾ ಎಂಬ ಕೃತಿ ಹಳೆಯ ರಷ್ಯ ಸಮಾಜವನ್ನು ಆದರ್ಶೀ ಕರಿಸುವ ಬೊರಿಸ್ ಗೊಡುನೋವ್ ಎಂಬ ಷೇಕ್‍ಸ್ಪಿಯರ್ ನಾಟಕ ಮಾದರಿಯ ಎರಡು ನಾಟಕಗಳು ಈತನ ಕೃತಿಗಳು ಪುಷ್ಕಿನ್ ರಷ್ಯದಲ್ಲಿ ಸೊಗಸಾದ ಕಾವ್ಯ ಮಾದರಿಯನ್ನು ರೂಪಿಸಿದ. ಹಿತವಾದ ಸಂಗೀತ ಕೇಳಿದಂತೆ, ನಾದಸೌಖ್ಯವನ್ನು ಕೊಡುವ ಶಬ್ದ ಪ್ರಯೋಗ. ಕಾವ್ಯಗುಣ ಗೇಯಗುಣ ಮೇಳವಿಸಿದ ಬರೆವಣಿಗೆ ಈತನ ಕೃತಿಗಳ ವೈಶಿಷ್ಟ್ಯ. ಮೊದಲ್ಲಿ ಕಿರಿಯ ಪ್ರಾಯದಲ್ಲಿ ಬರೆದ ಕಾವ್ಯದಲ್ಲಿದ್ದ ಕೋಮಲತೆ. ಭವನಾತ್ಮಕತೆಗಳನ್ನು ಮನಸಾ ಕೈಬಿಟ್ಟಿರುವುದು ದ ಕಾಸರ್ ಹಾರ್ಸ್‍ಮನ್‍ನಲ್ಲಿ ಮತ್ತು ಕೊನೆಗಾಲದ ಬರೆಹಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಎವ್‍ಮನ್‍ದಲ್ಲಿ ಮತ್ತು ಕೊನೆಗಾಲದ ಬರೆಹಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಎವ್‍ಗೆನಿ ಒನೆಗಿನ್ ಈತನ ಅತ್ಯಂತ ಶ್ರೇಷ್ಠ ಕೃತಿ. ಡಾನ್‍ಜೂಆನ್ ಮಾದರಿಯಲ್ಲಿ ಆರಂಭವಾದರೂ ಬೇರೆ ರೀತಿಯಲ್ಲಿ ಬೆಳೆದು ರಷ್ಯ ಸಮಾಜದ ಉಜ್ವಲ ಚಿತ್ರಣವನ್ನು ಮುಂದಿಡುತ್ತದೆ. ತತ್ಯಾನ ಲ್ಯಾರಿನಳ ಪಾತ್ರ, ಕಥಾನಾಯಕ ಪೀಟರ್ಸ್‍ಬರ್ಗ್‍ನ ಎವ್‍ಗೆನಿಯನ್ನು ಪಾತ್ರಗಳನ್ನು ಚಿತ್ರಿಸುವುದನ್ನು ನೋಡಿದರೆ ಒಬ್ಬ ವ್ಯಕ್ತಿಯ, ಇಲ್ಲವೆ ಒಂದು ವರ್ಗದ ಇಲ್ಲವೆ ಒಂದು ಕಾಲದ ಜೀವಾಳವೆಂಬಂತಹ ಮುಖ್ಯ ಲಕ್ಷಣಗಳನ್ನು ಪುಷ್ಕಿನ್ ಅತ್ಯಂತ ಕಲಾತ್ಮಕವಾಗಿ ಕೆಲವೇ ನುಡಿ ಗಟ್ಟುಗಳಲ್ಲಿ ಮೂರ್ತಗೊಳಿಸಬಲ್ಲನೆಂಬುದು ವ್ಯಕ್ತವಾಗುತ್ತದೆ. ಈ ಬಗೆಯ ಕಲಾತ್ಮಕತೆಯಲ್ಲಿ, ಅಡಕವಾಗಿ ಹೇಳುವುದರಲ್ಲಿ ಈತನನ್ನು ಸರಿಗಟ್ಟುವ ಸಾಹಿತಿ ರಷ್ಯನ್ ಸಾಹಿತ್ಯದಲ್ಲೇ ಮತ್ತೊಬ್ಬನಿಲ್ಲ. ತನ್ನ ಜೀವಿತದ ಕೊನೆಗಾಲದಲ್ಲಿ ಈತ ಗದ್ಯ ಬರೆಹಕ್ಕೆ ಕೈಹಾಕಿದ. ದ ಕ್ಯಾಪ್ಟನ್ಸ್ ಡಾಟರ್ ಎಂಬ ಕಾದಂಬರಿ 18 ನೆಯ ಶತಕದಲ್ಲಿ ನಡೆದ ಬಂಡಾಯದ ಕಥೆ. ವಾಲ್ಟರ್ ಸ್ಕಾಟ್‍ನ ಶೈಲಿಯದು. ಹಾಗೆಯೇ ಟೇಲ್ಸ್ ಆಫ್ ಬ್ಯೇಲಕಿನ್, ದ ಕ್ವೀನ್ ಆಫ್ ಸ್ಪೇಡ್ಸ್ - ಈ ಬಗೆಯ ಕಥೆಗಳು ಮತ್ತು ಉಳಿದ ಎಲ್ಲ ಕೃತಿಗಳಲ್ಲಿಯೂ ಗದ್ಯದ ಹೊಸ ಮಾದರಿಯನ್ನು ಮುಂದಿಟ್ಟ. ರಷ್ಯನ್ ಕಾವ್ಯದ ಸುವರ್ಣಯುಗದ ಪ್ರತೀಕ ಪುಷ್ಕಿನ್. ಇವನೊಂದಿಗೆ ಬೇರನ್ ಆ್ಯಂಟನ್ ಆ್ಯಂಟನೊವಿಚ್ ಡೆಲ್ವಿಗ್ (1798 - 1831). ಇವ್‍ಗೆನಿ ಅಬ್ರಮೊವಿಚ್ ಬರತಿನ್‍ಸ್ಕಿ (1800 - 44), ನಿಕಲಯ್ ಮಿಹೈಲೋವಿಚ್ ಯಾಜಿಕೋಫ್ (1803 - 46) ಇವರನ್ನೂ ಸೇರಿಸಬಹುದು. ಇವರೆಲ್ಲ ಶ್ರೇಷ್ಠ ಕುಲಸಂಜಾತರು. ವೃತ್ತಿಸಾಹಿತಿಗಳೊಂದಿಗೆ ಸೇರುವುದು ಮರ್ಯಾದೆಗೆ ಕಡಿಮೆ ಎಂದು ತಿಳಿದರು. ಶ್ರೀಮಂತ ಕುಲೀನ ಕವಿಗಳ ಪರಂಪರೆ ಅಲ್ಪಕಾಲದ್ದಾಗಿ ನೆಪೋಲಿಯನ್ ದಾಳಿಯನ್ನೆದುರಿಸಿ ಯುದ್ಧಮಾಡಿದ ಸೈನಾಧಿಕಾರಿಗಳು ಫ್ರೆಂಚ್ ಸೇನೆಯನ್ನೋಡಿಸಿ ಸ್ವದೇಶಕ್ಕೆ ಹಿಂತಿರುಗಿದ್ದರು.  ಅನಂತರ ಒಂದನೆಯ ಅಲೆಕ್ಸಾಂಡರ್ ದೊರೆ ಸತ್ತು ಸಿಂಹಾಸನವೇರುವ ಉತ್ತರಾಧಿಕಾರಿ ಬರಲು ತಡವಾದಾಗ ರಾಜತ್ವದ ವಿರುದ್ಧ ದಂಗೆಯೆದ್ದು ವಿಫಲಗೊಂಡಾಗ ಹೊಸ ಪೀಳಿಗೆಯ ಸಾಹಿತ್ಯ ಉದಯವಾಯಿತು. ಈ ಮಧ್ಯಂತರ ಕಾಲದ ಗಣ್ಯ ಸಾಹಿತಿಗಳಲ್ಲಿ ಕಾಂದ್ರತಿ ಫೆದರೊ ವಿಚ್ ರಿಲೆಯೆವ್ (1785 - 1826) ಮುಖ್ಯನಾದವನು. ತನ್ನ 41 ನೆಯ ವಯಸ್ಸಿನಲ್ಲಿ ಐತಿಹಾಸಿಕ ವಸ್ತುಗಳ ಮೇಲೆ ಅನೇಕ ಕವನಗಳನ್ನು ರಚಿಸಿದ. ಮಿಹೈಲ್ ಯೂರಿವಿಚ್ ಲೆರ್ಮಂತೊವ್ (1814 - 41) ಅಲ್ಪಾಯುವಾದರೂ ಪ್ರಚಂಡ ಮಾರುತನೆನಿಸಿದ ಕವಿ. ರಷ್ಯದ ಬೈರನ್ ಎಂದು ಹೆಸರಾದ ಶಕ್ತಿಯುತ ಕವಿ. ಕೊನೆಯ 4 ವರ್ಷಗಳ ಅವಧಿಯಲ್ಲಿ ಬಹುಶೀಘ್ರವಾಗಿ ಬೆಳೆದು ಪಕ್ವವಾದ ಕವಿ. ಬೆಡಗು ಪ್ರದರ್ಶನಗಳನ್ನು ತುಚ್ಛೀಕರಿಸಿ ಅಂತಃಕರಣ ಸಹಜತೆಯನ್ನು ತನ್ನ ಎಲ್ಲ ಕವನಗಳಲ್ಲೂ ವೈವಿಧ್ಯಮಯವಾಗಿ ಅಭಿವ್ಯಕ್ತಿಸಿದ್ದಾನೆ. ಡೀಮನ್ (ಶಾಪಗ್ರಸ್ತ ದೇವತೆ ಮತ್ರ್ಯಕನ್ಯೆಯೊಬ್ಬಳಲ್ಲಿ ಅನುರಕ್ತನಾದ ಪ್ರೇಮಕಥೆ) ಎಂಬ ಕವನದಲ್ಲಿ ಅದ್ವಿತೀಯವಾದ ಕಾವ್ಯ. ಪ್ರತಿಮೆಗಳನ್ನು ಕಾಣಬಹುದು. 1840 ರ ಅನಂತರದ ರಷ್ಯದ ಜಮೀನ್ದಾರಿ ಮನೆತನಗಳ ಬದುಕಿನ ಅವಲೋಕನವನ್ನು ಮಾಡಿರುವ ಮತ್ಸಿರಿ ಎಂಬ ಕಾವ್ಯವೂ ಇಂತಹ ಒಂದು ಶ್ರೇಷ್ಠ ಕೃತಿ.
	ಸಾಹಿತ್ಯದಲ್ಲಿ ಪದ್ಯಕ್ಕೆ ಬದಲು ಗದ್ಯ ಪ್ರಧಾನವಾದಾಗ ದ ಹೀರೊ ಆಫ್ ಅವರ್ ಟೈಮ್ಸ್ ಎಂಬತಹ ಕಥಾಸರಣಿ ಮೊದಲು ಕಾಣಿಸಿತು. ಮನೋವೈಜ್ಞಾನಿಕ ಕಾದಂಬರಿಯ ಉಗಮವನ್ನು ಈ ಕಥೆಗಳಲ್ಲಿ ಕಾಣುತ್ತೇವೆ. ಈ ಕಥೆಗಳಲ್ಲಿ ತೇಮನ್ ಎಂಬುದು ಶ್ರೇಷ್ಠವಾದ ಸಣ್ಣಕಥೆ ಎಂದು ಚೆಕಾಫ್ ಗುರುತಿಸಿದ್ದಾನೆ. ಈ ಕಾಲದ ಮಹಾಪ್ರತಿ ಭಾವಚಿತ, ಶ್ರೇಷ್ಠತೆಯಲ್ಲಿ ಪುಷ್ಕಿನ್‍ಗೆ ಸಮ ಎಂದೆನಿಸಿದ್ದ ಲೆರ್ಮಂತೊವ್‍ನ ಅಕಾಲಿಕ ಮರಣದಿಂದ ರಷ್ಯನ್ ಸಾಹಿತ್ಯಕ್ಕಾದ ನಷ್ಟ ಅಪಾರವಾದುದು.
	ಪ್ಯೋದರ್ ಇವ್ಯಾನೊವಿಚ್ ತ್ಯೂಚೆಫ್‍ನ (1803 - 73) ತಾತ್ವಿಕ ಚಿಂತನೆಯ, ಗೇಯ ಮಾಧುರ್ಯದ ಕವನಗಳು ಒಂದು ಬಗೆಯಾದರೆ ಅಲಿಕ್ಸೆಯಿ ವಾಸಿಲ್ಯೇವಿಚ್ ಕಲ್ತ್‍ಸೊವ್‍ನ (1808 - 42) ಬೇರೆಯೇ ಸ್ತರದ ರೈತಾಪಿ ಕವನಗಳು ಶಿಷ್ಟ ಸಾಹಿತ್ಯದಿಂದ ದೂರವಾದ ನೈಜ ಜನಪದ ಸೊಗಡಿನ ಗೀತೆಗಳು ಇನ್ನೊಂದು ಬಗೆ. ತ್ಯೂಚಿಫ್ ಈ ಕಾಲದ ಶ್ರೇಷ್ಠ ಕವಿಗಳಲ್ಲೊಬ್ಬ. ಮೆಟಫಿಜಿಕಲ್ ಗುಂಪಿಗೆ ಸೇರಿದವನು. ಈ ಇಬ್ಬರು ಕವಿಗಳೊಂದಿಗೆ ರಷ್ಯನ್ ಕಾವ್ಯದ ಸುವರ್ಣಯುಗ ಮುಗಿಯಿತು. ಅನಂತರ ಗದ್ಯಯುಗ - ಅಂದರೆ ಕಾದಂಬರಿಯುಗ ಆರಂಭವಾಯಿತು. 19 ನೆಯ ಶತಕದ ಮೊದಲಲ್ಲಿ ಬಂದ ಕಾದಂಬರಿಗಳು ಎಲ್ಲೊ ಕೆಲವು. ಪುಷ್ಕಿನ್‍ನ ದ ಕ್ಯಾಪ್ಟನ್ಸ್ ಡಾಟರ್ (1836), ಲೆರ್ಮಂತೊವ್‍ನ ದಿ ಹೀರೊ ಆಫ್ ಅವರ್ ಟೈಮ್ಸ್ (1846) ಕೃತಿಗಳಲ್ಲಿ ವಾಸ್ತವಿಕತೆ, ಮಾನವ ಮನಸ್ಸಿನ ಅಧ್ಯಯನ ಕಾಣುತ್ತದೆ. ರಮ್ಯ - ವಾಸ್ತವತೆಗಳು ಮಿಶ್ರಿತವಾದ ಕತೆಗಳನ್ನು ಹೆಣೆದ ನಿಕೊಲಯ್ ವಾಸಿಲ್ಯೇವಿಚ್ ಗೋಗೋಲ್ (1809 - 52) ಸಮಕಾಲೀನ ಸಾಹಿತಿಗಳಾದ ಬೇರೆಯಾಗಿ ನಿಲ್ಲುವ ವಿಶಿಷ್ಟ ಬಗೆಯ ಶ್ರೇಷ್ಠ ಗದ್ಯ ಸಾಹಿತಿ. ತುಂಬ ನಾಜೂಕಾದ ಆರೋಗ್ಯ, ಸಂಕೋಚ ಸ್ವಭಾವವುಳ್ಳ ಈ ಯುವಕ ದೊಡ್ಡ ಕವಿಯಾಗುವ ನಸು ಕಟ್ಟಿಕೊಂಡು ಸೇಂಟ್ ಪೀಟರ್ಸ್‍ಬರ್ಗ್‍ಗೆ ಹೋದ. ಜೊತೆಗೆ ಇತಿಹಾಸ ಪ್ರೊಫೆಸರ್ ಆಗುವ ಆಸೆಯು ಇತ್ತ. ಕಾವ್ಯ ರಚನೆಯಲ್ಲಿ ವಿಫಲನಾದ. ಈವ್ನಿಂಗ್ಸ್ ಆನ್ ಎ ಫಾರಮ್ ನಿಯರ್ ಡಿಕಾಂಕ ಎಂಬ ಕೃತಿಯಿಂದ ಪ್ರಸಿದ್ಧನಾದ. ಇದು ಸಣ್ಣ ರಷ್ಯ ಎಂದೆನಿಸುವ ಉಕ್ರೇನಿನ ಬದುಕಿನ ಹಲವು ಹನ್ನೊಂದು ಅನುಭವಗಳನ್ನು ನಿರೂಪಿಸುವ ಸಣ್ಣ ಕಥೆಗಳ ಸಂಕಲನ. ಮಾಟ ಮದ್ದು, ಭೂತ, ಪಿಶಾಚಿಗಳ ಘಟನೆಗಳು ಹೇರಳವಾಗಿವೆ. ಈತನ ಇನ್ನೊಂದು ಹೆಸರಾಂತ ಕೃತಿ ಮಿರ್‍ಗೋರದ್. ಓವರ್‍ಕೋಟ್ ಎಂಬ ಸಣ್ಣ ಕಥೆ ಕೂಡ ಅಷ್ಟೇ ಪ್ರಸಿದ್ಧವಾಗಿದೆ. ವಾಸ್ತವ ಸನ್ನಿವೇಶಗಳು, ಪಾತ್ರಚಿತ್ರಣದಲ್ಲಿ ವ್ಯಂಗ್ಯ ಈ ಕಥೆಗಳ ಮುಖ್ಯ ಲಕ್ಷಣಗಳು. ಕತೆಗಾರ ತಾನು ಬೆಳೆದ ದೇಸೀ ಪರಿಸರದಿಂದ ಎತ್ತಿಕೊಂಡ ವಸ್ತುಗಳನ್ನೇ ಕತೆಗಳಿಗೆ ಆರಿಸಿಕೊಂಡಿದ್ದಾನೆ. ಮುಂದೆ ಪೂರ್ತಿ ರಷ್ಯದ ರಾಜಧಾನಿಯ ಜೀವನವನ್ನು ಕುರಿತ ಸಾಹಿತ್ಯವನ್ನೇ ರಚಿಸಿದ. ಈತ ಬರೆದ ವೈನೋದಿಕಗಳಲ್ಲಿ ದ ಇನ್ಸ್‍ಪೆಕ್ಟರ್ ಜನರಲ್ ಎಂಬ ವಿಡಂಬನಾತ್ಮಕ ನಾಟಕ ಪ್ರಸಿದ್ಧವಾದುದು. ಕೆಳವರ್ಗದ ನೌಕರರ ಭ್ರಷ್ಟಾಚಾರವನ್ನು ಈ ನಾಟಕದಲ್ಲಿ ವಿಡಂಬನೆ ಮಾಡಿದ್ದಾನೆ. ಈ ನಾಟಕವನ್ನು ರಂಗದ ಮೇಲೆ ನೋಡಿದ ದೊರೆ ನಿಕಲಸ್ ಸಹ ನಕ್ಕು ಮೆಚ್ಚಿಕೊಂಡನಂತೆ. ಆದರೆ ನಾಟಕ ಒಂದು ಮನರಂಜಕ ಹಾಸ್ಯ ಪ್ರಹಸವಾಯಿತೇ ವಿನಹ ಉದ್ದೇಶಿಸಿದಂತೆ ಸುಧಾರಣೆ ತರುವ ವಿಡಂಬನೆಯಾಗಲಿಲ್ಲ ಎಂದು ಗೋಗೋಲ್ ವ್ಯಥಿತನಾದ. ಬಡಜನರ ಬದುಕಿನ ಸ್ಥಿತಿಯನ್ನು ಕುರಿತ ದ ಕ್ಲೋಕ್ ಎಂಬ ಕಥೆ ಹೊಸ ಅಲೆಯ ಸಾಹಿತ್ಯಕ್ಕೆ ನಾಂದಿಯಾಯಿತು. ಗೋಗೋಲ್ ಜನಪ್ರಿಯವಾದ. ಪುಷ್ಕಿನ್‍ನ ಸಲಹೆಯ ಮೇರೆಗೆ ಬರೆದ ಡೆಡ್‍ಸೋಲ್ಸ್ ಬಹುದೊಡ್ಡ ಗದ್ಯಕಾವ್ಯ. ರಷ್ಯ ಅನುಸರಿಸಬೇಕಾದ ದಾರಿಯಾವುದು ಎಂದು ಸೂಚಿಸುವ ಕೃತಿ. ಇದರ ಮೊದಲ ಭಾಗವನ್ನು ಮಾತ್ರ ಬರೆದು ಪ್ರಕಟಿಸಿದ. ನೇತ್ಯಾತ್ಮಕ ದನಿಯಿಂದಾಗಿ ಈ ಕೃತಿ ವಿಫಲಗೊಂಡಿತು. ಗೋಗೋಲ್‍ನ ಬದುಕಿನ ಕೊನೆಯ ದಿನಗಳು ಧಾರ್ಮಿಕ ಪ್ರವೃತ್ತಿಯ ಅತಿರೇಕಗಳಲ್ಲಿ ಕಳೆದವು. ಸುಧಾರಣೆಗಾಗಿಯೇ ಹೊರತಂದ ಸೆಲೆಕ್ಟಡ್ ಪ್ಯಾಸೇಜಸ್ ಫ್ರಮ್ ಕರೆಸ್ಪಾಂಡೆನ್ಸ್ ವಿಥ್ ಫ್ರೆಂಡ್ಸ್ ಎಂಬ ಕೃತಿ ಹಲವರ ಕಟು ವಿಮರ್ಶೆಗೆ ಗುರಿಯಾಯಿತು. ಗೋಗೋಲ್ ನಿರಾಸೆಯಿಂದ ಉತ್ಸಾಹ ಮತ್ತು ಬುದ್ಧಿ ಸ್ವಾಸ್ಥ್ಯವನ್ನು ಕಳೆದುಕೊಂಡು ಕೊನೆಯುಸಿರೆಳೆದ.
	ಡಿಸೆಂಬರ್ ಕ್ರಾಂತಿ ಮತ್ತು ಒಂದನೆಯ ನಿಕಲಸ್‍ನ ಬಿಗಿ ದಮನ ನೀತಿಯ ಪರಿಣಾಮವಾಗಿ ಸಾಹಿತ್ಯ ಲೋಕದಲ್ಲಿ ದೊಡ್ಡ ಬದಲಾವಣೆಯಾಯಿತು. ಅದುವರೆಗೆ ಸಾಹಿತ್ಯ ಸೂತ್ರಗಳನ್ನು ಹಿಡಿದಿದ್ದ ಕುಲೀನ ಶ್ರೀಮಂತ ವರ್ಗವನ್ನು ಒತ್ತಿ ಪತ್ರಕರ್ತರ ಮತ್ತು ವಿಚಾರವಂತರ ಹೊಸ ಗುಂಪು ತಲೆಯೆತ್ತಿತು. ಅವರಲ್ಲಿ ಪಶ್ಚಿಮದ ಒಲವಿನವರು, ಸ್ಲಾವ್ ಒಲವಿನವರು ಎಂದು ಎರಡು ಪಂಥಗಳಾಗಿ ಇಬ್ಬರ ನಡುವಿನ ವಾದ ವಿವಾದಗಳೇ ಮುಂದೆ ಅನೇಕ ದಶಕಗಳವರೆಗೆ ಸಾಹಿತ್ಯ ಪಥವನ್ನು ನಿರ್ಧರಿಸಿದವು.
	ಸ್ಲಾವ್ ಪ್ರಿಯರು ಸನಾತನಿಗಳು. ಪಶ್ಚಿಮದ ಗಾಳಿಯನ್ನು ತಡೆದು ರಷ್ಯದ ವಿಶಿಷ್ಟತೆಯನ್ನು ರಕ್ಷಿಸಬೇಕೆನ್ನುವವರು. ನಿರಂಕುಶಾಧಿಕಾರ, ಚರ್ಚಿನ ಸಂಪ್ರದಾಯದ ಧಾರ್ಮಿಕ ಪಂಗಡಗಳನ್ನು ಸಮರ್ಥಿಸಿದರು. ಜೀತ ಪದ್ಧತಿಯನ್ನು ಮಾತ್ರ ಇವರು ವಿರೋಧಿಸಿದರು. ಎ ಫ್ಯಾಮಿಲಿ ಕ್ರಾನಿಕಲ್ ಮತ್ತು ರಷ್ಯ ಜಮೀನ್ದಾರಿ ಮನೆತನಗಳ ಬದುಕಿನ ಅವಲೋಕನ ನೀಡುವ ದ ಅರ್ಲಿ ಇಯರ್ಸ್ ಆಫ್ ಬಾಗ್ರೊವ್ ಗ್ರ್ಯಾಂಡ್‍ಸನ್ ಎಂಬ ಕೃತಿಯನ್ನು ಬರೆದ ಸರ್ಗೆಯ ತಿಮೊಪೆಯೆವಿಚ್ ಅಕ್ಸಕೊಫ್ (1791 - 1859). ಅಲೆಕ್ಸೆಯ ಸ್ತಿಷಾನೊವಿಚ್ ಖೋಮ್ಯಾ ಕಫ್ (1804 - 60), ಕಿರಿಯೆವ್‍ಸ್ಕಿ ಸೋದರರಾದ ಇವಾನ್ (1806 - 56), ಪೀಟರ್ (1808 - 56) ಮತ್ತು ಕಾನ್ಸಟಾಂಟೆನ್ ನಿಕಲಯೊವಿಚ್ ಲಿಯೊಂತೇಫ್ (1831 - 91) - ಈ ಉಜ್ಜ್ವಲ ಲೇಖಕರು ಸ್ಲಾವ್ ಗುಂಪಿನವರು.
	ಪಶ್ಚಿಮದ ಪ್ರಭಾವವನ್ನು ಸ್ವಾಗತಿಸುವವರ ಸಾಹಿತ್ಯ ಕ್ಷೇತ್ರವೇ ಹೆಚ್ಚು ಫಲವತ್ತಾಗಿತ್ತು. ಪೀಟರ್ ಯಾಕೊವ್ಲ್ವಿಚ್ ಚದಾಯೆಫ್‍ನ (1793 - 1856) ದ ಫಿಲಸಾಫಿಕಲ್ ಲೆಟರ್ಸ್ ಎಂಬ ಕೃತಿ ರೋಮನ್ ಕ್ಯಾಥಲಿಕ್ ಚರ್ಚಿನ ನಿಲುವಿನಲ್ಲಿ ರಷ್ಯದ ಇತಿಹಾಸ, ಸಂಸ್ಕøತಿಗಳನ್ನು ಖಂಡಿಸುತ್ತದೆ. ವಿಸೇರಿಯನ್ ಗ್ರಿಗರ್ಯೇವಿಚ್ ಬೆಲಿನ್‍ಸ್ಕಿ (1810 - 48) ತಲೆಯೆತ್ತತೊಡಗಿದ ಬುದ್ಧಿಜೀವಿಗಳ ಮುಂದಾಳಾದ. ಫ್ರೆಂಚ್ ಸಮತಾವಾದಿಗಳ ವಿಚಾರಗಳನ್ನು ಸಾಹಿತ್ಯದಲ್ಲಿ ತಂದ. ಸಾಮಾಜಿಕ ಕ್ರಾಂತಿಯನ್ನು ತರುವುದೇ ಶ್ರೇಷ್ಠ ಸಾಹಿತ್ಯದ ಲಕ್ಷಣ ಎಂದ. ಅಲೆಕ್ಸಾಂಡರ್ ಇವಾನೊವಿಚ್ ಹೆರ್ಜನ್ (1812 - 70), ನಿಕಲಾಯ್ ಗವ್ರಿಲೋವಿಚ್ ಚೆರ್ನಿ ಷೆವ್‍ಸ್ಕಿ (1808 - 89) ಮತ್ತು ಈತನ ಕಾದಂಬರಿ ವಾಟ್‍ಈಜ್ ಟು ಬಿ ಡನ್, ನಿಕಲಾಯ್ ಅಲೆಕ್ಸಾಂಡ್ರಿವಿಚ್ ದಬ್ರೊಲ್ಯುಬಫ್ (1836 - 81). ಡಿಮಿಟ್ರಿ ಇವಾನೊವಿಚ್ ಪಿಸಾರೆಫ್ (1840 - 78) ಮುಂತಾದ ಬರೆಹಗಾರರು ಸಾಮಾಜಿಕ ಕಾಳಜಿ, ಬದುಕಿಗೆ ಆವಶ್ಯಕವಾದ ಪ್ರಾಪಂಚಿಕ ವಸ್ತುಗಳು ಮತ್ತು ಪ್ರಯೋಜನ ದೃಷ್ಟಿಗಳನ್ನು ಬೆಳೆಸುವ ಆವೇಶದಲ್ಲಿ ಪುಷ್ಕಿನ್‍ಗಿಂತ ಪದರಕ್ಷೆಗಳು ಹೆಚ್ಚು ಉಪಯುಕ್ತ. ಕಲೆ ಕಾವ್ಯಗಳನ್ನು ಕಟ್ಟಿಕೊಂಡೇನು ಎಂಬ ಅತಿರೇಕಕ್ಕೆ ಒಯ್ದರು. ಸಾಹಿತ್ಯ ವಿಮರ್ಶೆಗಿಂತ ಪಾಶ್ಚಾತ್ಯ ವಿಜ್ಞಾನದ ಮುನ್ನೆಡೆ, ರಾಜಕೀಯ ಹಾಗೂ ಸಾಮಾಜಿಕ ಚರ್ಚೆ ಮುಖ್ಯವಾದವು. ಮುಂದಿನ 50 ವರ್ಷಗಳ ರಷ್ಯನ್ ಸಾಹಿತ್ಯ ಇತಿಹಾಸ ಈ ವಿಚಾರಗಳಿಂದ ರೂಪುಗೊಂಡಿತು. ಕಾವ್ಯದ ಬದಲು ಕಾದಂಬರಿ ಮುಖ್ಯ ಪ್ರಕಾರವಾಗಿ ಬೆಳೆಯಿತು. ಈ ಕಾಲವನ್ನು ಕಾದಂಬರಿಯ ಸುವರ್ಣಯುಗ ಎಂದು ಕರೆಯಬಹುದು.
	ಇವಾನ್ ಸೆರ್ಗಿಯೆವಿಚ್ ತುರ್ಗೇನೆಫ್ (1818 - 83) ಐರೋಪ್ಯವೆನಿಸಬಹುದಾದ ರಷ್ಯನ್ ಲೇಖಕ. ತಾಯಿಯೊಡನೆ ಜಗಳವಾಡಿ, ಆಸ್ತಿ ಹಕ್ಕನ್ನು ಕಳೆದುಕೊಂಡು ಪಶ್ಚಿಮ ಯೂರೋಪಿನಲ್ಲಿರುತ್ತ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಗೌರವ ಪದವೀಧರನಾಗಿ ವಿದೇಶದಲ್ಲಿ ರಷ್ಯನ್ ಸಾಹಿತ್ಯದ ವಕ್ತಾರನಾದ. ಮೆಮಾಯಿರ್ಸ್ ಆಫ್ ಎ ಸ್ಪೋಟ್ರ್ಸ್‍ಮನ್ ಎಂಬ ಕೃತಿ ಶಿಕಾರಿ ಚಿತ್ರಗಳ ಸರಣಿ. ಅಂಕಲ್‍ಟಾಮ್ಸ್ ಕ್ಯಾಬಿನ್ ತರಹ ಜೀತ ವಿಮುಕ್ತಿಯ ಧೋರಣೆಯುಳ್ಳ ಸಾಹಿತ್ಯ ಕೃತಿ. ಜಮೀನ್ದಾರರನ್ನು ರಾಕ್ಷಸರನ್ನಾಗಿ ಚಿತ್ರಿಸದೆ ಜೀತಕ್ಕಿರುವವರ ಗುಣ ಸಂಪನ್ನತೆಯನ್ನು ಮಾತ್ರ ಎತ್ತಿ ತೋರಿಸುತ್ತ, ಈ ಬಡಪಾಯಿಗಳು ಒಳ್ಳೆಯವರಾಗಿದ್ದರೂ ಸಂಕಟಗಳಿಗೆ ಗುರಿಯಾಗುವುದನ್ನು ಪ್ರಧಾನ ಮಾಡಿ ಬರೆದಿರುವುದು ಪರಿಣಾಮಕಾರಿಯಾಗಿದೆ. ಎರಡನೆಯ ಅಲೆಗ್ಸಾಂಡರ್ ಜಾರ್ ಇದರ ಒಂದು ಪ್ರತಿಯನ್ನು ಸದಾ ತನ್ನೊಡನೆ ಇಟ್ಟುಕೊಂಡಿರುತ್ತಿದ್ದನಂತೆ. 20 ವರ್ಷಗಳ ಅವಧಿಯಲ್ಲಿ ರುಡಿನ್, ಎ ನೆಸ್ಟ್ ಆಫ್ ನೋಬಲ್ಸ್, ಆನ್ ದ ಈವ್, ಫಾದರ್ಸ್ ಅಂಡ್ ಚಿಲ್ಡ್ರನ್, ಸ್ಮೋಕ್, ವರ್ಜಿನ್ ಸಾಯಿಲ್ ಎಂಬ ಆರು ಕಾದಂಬರಿ ಸರಣಿಯನ್ನು ಬರೆದು ಈತ ಸಾಮಾಜಿಕ ಕಳಕಳಿ ಇರುವ ಧ್ಯೇಯವಾದಿ ಯುವ ಜನರ ಪ್ರಗತಿಶೀಲ ಬೆಳವಣಿಗೆಯನ್ನು ಚಿತ್ರಿಸಿದ. ಚೆನ್ನಾಗಿ ಓದಿಸಿಕೊಂಡು ಹೋಗುವ ಈ ಕಥೆಗಳಲ್ಲಿ ಚಿತ್ರಿತವಾಗಿರುವ ಮಹಿಳೆ ಪುರುಷನಿಗಿಂತ ಹೆಚ್ಚು ತ್ಯಾಗಶೀಲೆಯೂ ಕ್ರಿಯಾಶೀಲೆಯೂ ಆಗಿದ್ದಾಳೆ. ಎ ನೆಸ್ಟ್ ಆಫ್ ನೋಬಲ್ಸ್ ಒಂದು ಪರಿಪೂರ್ಣ ಕಾದಂಬರಿ. ಫಾದರ್ಸ್ ಅಂಡ್ ಚಿಲ್ಡ್ರನ್ ಅಂಥದೇ ಒಂದು ಶ್ರೇಷ್ಠ ಕೃತಿ. ಇದರ ನಾಯಕ ಬಜರೊವ್‍ನ ಪಾತ್ರ ಚಿತ್ರಣ ಅದ್ಭುತವಾಗಿದೆ. ಆದರೆ ಈತನ ಶೂನ್ಯವಾದ, ತನ್ನ ಪ್ರತಿಯೊಂದು ಪ್ರವೃತ್ತಿಯನ್ನೂ ವಿಜ್ಞಾನದ ನಿಯಮಕ್ಕೆ ಒಳಪಡಿಸುವ ಪ್ರಯತ್ನದಲ್ಲಿ ವಿಫಲನಾಗುವುದು ಕಿರಿಯ ಪೀಳಿಗೆಯವರ ಕಟು ವಿಮರ್ಶೆಗೆ ಗುರಿಯಾಗಿ ತುರ್ಗೇನೆಫ್‍ನ ಮನಸ್ಸನ್ನು ಕಹಿಗೊಳಿಸಿತು. ಆದರೂ ಸಾವಿನಂಚಿನಲ್ಲಿದ್ದಾಗ ಬರೆದ ಪೊಯಿಮ್ಸ್ ಇನ್ ಪ್ರೋಜ್‍ನಲ್ಲಿ ಮತ್ತು ಇತರ ಚಿಕ್ಕ ಚಿಕ್ಕ ಸಾಹಿತ್ಯ ಚಿತ್ರಗಳಲ್ಲಿ ದೇಶಾಭಿಮಾನ, ವಿಶ್ವಾಸಗಳು ಅಚ್ಚಳಿಯದೆ ಮೂಡಿವೆ.
	19ನೆಯ ಶತಕದ ಉತ್ತರಾರ್ಧ ಬೌದ್ಧಿಕ ಕುತೂಹಲಕ್ಕೆ ಹೆಸರಾದುದು. ಈ ಕಾಲದಲ್ಲಿ ಬಂದ ಅಲೆಗ್ಸಾಂಡರ್ ಇವಾನೊವಿಚ್ ಗನ್‍ಚೆರಾಫ್ (1812 - 91) ವ್ಯತಿರಿಕ್ತವಾಗಿ ಕ್ರಿಯಾಹೀನ ಅಥವಾ ಜಡ ಸಾಹಿತಿಯಾಗಿಯೇ ಹೆಸರಾದ. ಬರೆದುದು ಓಬಿಕ್ನೊವೆನ್ಯ ಇಸ್ಯೋರಿಯ (1847). ಒಬ್ಲಮೊವ್ (1857). ಓಬ್ರಿವ್ (1869) ಎಂಬ ಮೂರೇ ಕಾದಂಬರಿ. ಓಬ್ಲಮೊವ್ ಒಂದು ಆಚಾರ್ಯ ಕೃತಿ. ನಾಯಕ ಓಬ್ಲಮೊವ್ ಜೀತಪದ್ಧತಿಯ ಸಮಾಜದಲ್ಲಿ ಬೆಳೆದ ವಿಶಿಷ್ಟ ರಷ್ಯನ್ ಮನೋಧರ್ಮದ ಪ್ರತೀಕ. ಉದಾಸೀನನಲ್ಲವಾದರೂ ಕಾರ್ಯ ಪ್ರವೃತ್ತನಾಗಲು ಹಿಂಜರಿಯುವ ಸೋಮಾರಿ. ಆದರೆ ತನ್ನದೇ ಒಂದು ಪಂಥವನ್ನು ಬೆಳೆಸುವಂಥ ಪ್ರಭಾವಶಾಲಿ ನಾಯಕ. ಇದೊಂದು ಅಮರಕೃತಿ ಎನಿಸಿದ ಈ ಕಾದಂಬರಿ ಅಪಾರ ಜನಪ್ರಿಯತೆಗಳಿಸಿತು. ರಷ್ಯದ ಅತ್ಯಂತ ಶ್ರೇಷ್ಠ ಆರು ಕಾದಂಬರಿಗಳಲ್ಲಿ ಒಂದೆಂದು ಇದನ್ನು ಪರಿಗಣಿಸಬಹುದು. ಇದೆ ಪೀಳಿಗೆಗೆ ಸೇರಿದ ಇನ್ನಿಬ್ಬರು ಮಹಾ ಸಾಹಿತಿಗಳು ರಷ್ಯನ್ ಸಾಹಿತ್ಯ ಹಾಗೂ ವಿಶ್ವ ಸಾಹಿತ್ಯ ಎರಡನ್ನೂ ಶ್ರೀಮಂತಗೊಳಿಸಿದವರೆಂದರೆ ಕೌಂಟ್ ಲಿಯೊ ಟಾಲ್ಸ್‍ಟಾಯ್ (1828 - 1910) ಮತ್ತು ಫ್ಯೋದರ್ ದಸ್ತಾಯಿವ್‍ಸ್ಕಿ (1821 - 81).
	ಟಾಲ್ಸ್‍ಟಾಯ್ ನಿಸ್ಸಂದೇಹವಾಗಿ ಮಹಾಪುರುಷ, ಮಹಾನ್ ಲೇಖಕ. ಸೈನ್ಯಾಧಿಕಾರಿಯಾಗಿ ಜಮೀನು ಒಡೆಯನಾಗಿ, ಗೃಹಸ್ಥನಾಗಿ, ಲೇಖಕನಾಗಿ ಎಲ್ಲದರಲ್ಲೂ ಇವನ ಅನುಭವ ತೀವ್ರವಾದುದು. ಚಿಂತನೆ ಗಾಢವಾದುದು. ಮನುಕುಲದ ನೈತಿಕತೆಯ ಬಗೆಗೆ ಒದ್ದಾಡಿದವನು. ಇವನದು ನೈತಿಕ ಧಾರ್ಮಿಕ ಸಮಸ್ಯೆಗಳ ಬಗ್ಗೆ ಆಳವಾದ ಆಸಕ್ತಿ. ವಿಚಾರ ಶೀಲನಾದರೂ ಕೆಲವೊಮ್ಮೆ ಈತನ ವಿಚಾರಗಳಲ್ಲಿ ವಿರುದ್ಧ ದೃಷ್ಟಿಗಳ ತಾಕಲಾಟ ಕಾಣಬರುತ್ತದೆ. ಒಮ್ಮೆ ಅನುಮೋದಿಸಿದ್ದನ್ನು ಇನ್ನಾವುದೊ ಸಂದರ್ಭದಲ್ಲಿ ಖಂಡಿಸುವುದು. ಖಂಡಿಸಿದ್ದನ್ನು ಮತ್ತೊಂದೆಡೆ ಅನುಮೋದಿಸುವುದೂ ಉಂಟು. ಈತ ಉಜ್ಜ್ವಲವಾದ ಪಾತ್ರಗಳನ್ನು ಸೃಷ್ಟಿಸಿದ. ಕಣ್ಣಿಗೆ ಕಟ್ಟಿದಂತೆ ಚಿತ್ರಿಸುವ ಛಾಯಾಗ್ರಾಹಕ ಶಕ್ತಿ ಈತನ ಲೇಖನಿಗಿತ್ತು. ಚೈಲ್ಡ್‍ಹುಡ್, ಬಾಯ್‍ಹುಡ್ ಅ್ಯಂಡ್ ಯೂಥ್ ಎಂಬ ಆತ್ಮಕಥಾ ಕೃತಿಗಳಿಂದ ಇವನ ಸಾಹಿತ್ಯ ಜೀವನ ಆರಂಭವಾಯಿತು. ಈತನ ಕೃತಿಗಳಲ್ಲೆಲ್ಲ ಸ್ವತಂತ್ರ ಜೀವನಾನುಭವಗಳ ಕಲಾತ್ಮಕ ಚಿತ್ರಣವನ್ನೇ ಕಾಣುತ್ತೇವೆ. ಶ್ರೀಮಂತಿಕೆಯ ಧೋರಣೆ, ಪ್ರಚಂಡವಾದ ಆತ್ಮ ಪ್ರತ್ಯಯಗಳ ಹಿಂದೆ ಕೀಳರಿಮೆ ಅಡಗಿತ್ತು. ಕ್ರಮಿಯನ್ ಯುದ್ಧದ ವಾಸ್ತವ ಚಿತ್ರಗಳನ್ನು ಈತ ಕಥೆಗಳ ರೂಪದಲ್ಲಿ ಬರೆದ. ದ ಕಾಸ್ಯಾಕ್ಸ್ (1863) ಒಂದು ಶ್ರೇಷ್ಠ ಕಥಾ ಸಂಕಲನ. ಇಲ್ಲಿಯ ಕಥೆಗಳು ಮನವ ನಾಗರಿಕತೆಯ ಟೊಳ್ಳನ್ನು ಎತ್ತಿ ತೋರಿಸುತ್ತವೆ. ವಾರ್ ಅಂಡ್ ಪೀಸ್ (1865) ಈತನ ಆಚಾರ್ಯ ಕೃತಿ ; ಅಸಾಧಾರಣವಾದ ಮೇರು ಕೃತಿ. ಇದು ಕದಂಬರಿಯ ಮಿತಿಯನ್ನು ಅತಿಕ್ರಮಿಸಿ ಬೆಳೆದ ಸಮಸ್ತ ರಷ್ಯದ ಬೃಹತ್ ಅವಲೋಕನವಾಗಿದೆ. ಸರ್ವಾಧಿಕಾರದ ದೌಷ್ಟ್ಯವನ್ನು ಸೋಲಿಸಿದ ರಷ್ಯದ ಮೂಲಭೂತ ಮಾನವೀಯ ಶಕ್ತಿ. ಸತ್ವ ಮತ್ತು ಉತ್ಕಟ ರಾಷ್ಟ್ರಾಭಿಮಾನಗಳನ್ನು ಎತ್ತಿ ಹಿಡಿದ ಮಹಾಕಾದಂಬರಿ. ಅನ ಚರನಿನ (1877) ಇನ್ನೊಂದು ಮಹತ್ತರವಾದ ಕಾದಂಬರಿ. ಉಜ್ಜ್ವಲ ಹಾಗೂ ಆಕರ್ಷಕ ವ್ಯಕ್ತಿತ್ವವಿದ್ದ ಗೃಹಿಣಿ ಪ್ರಣಯಕ್ಕೊಳಗಾಗಿ ಪತಿಪುತ್ರರನ್ನು ತ್ಯಜಿಸಿ ಪತನದ ಹಾದಿ ಹಿಡಿಯುವ ಜೀವನ ಚಿತ್ರಣ ಇದರಲ್ಲಿ ಸೊಗಸಾಗಿ ಮೂಡಿಬಂದಿದೆ. ಹಂತ ಹಂತವಾಗಿ ಆಗುವ ಅವಳ ಪ್ರಾಮಾಣಿಕ ವ್ಯಕ್ತಿತ್ವ, ಹುಸಿ ಗೌರವಾನ್ವಿತ ಮಹಿಳೆಯರಿಗಿಂತ ಆಕೆ ಉತ್ತಮ ಎಂಬ ಭಾವನೆಯನ್ನೂ ಕನಿಕರವನ್ನೂ ಮೂಡಿಸುತ್ತದೆ. ಲೆವಿನ್ ಮತ್ತು ಕಿಟ್ಟಿಯರ ಪರಿಶುದ್ಧವಾದ ಪ್ರೇಮ ವೈದೃಶವಾಗಿ ಬರುತ್ತದೆ. ಬಾಹ್ಯದಲ್ಲಿ ಸುಖವಾಗಿರುವಂತೆ ಕಂಡರೂ ಆಂತರ್ಯದಲ್ಲಿ ಚೆನ್ನಾಗಿ ಬದುಕಬೇಕೆಂಬ ಆಸೆಯಿಂದ ಕೊರಗುತ್ತ ಲೆವಿನ್ (ಟಾಲ್ಸ್‍ಟಾಯ್) ನೈತಿಕ ಸಮಸ್ಯೆಗಳನ್ನೂ ತಲೆಯಲ್ಲಿ ತುಂಬಿಕೊಂಡಿರುವುದು ಕಾಣುತ್ತದೆ. ಕನ್‍ಫೆಷನ್ (1879) ಎಂಬ ಕೃತಿ ಆತ್ಮಕಥೆಗಳಲ್ಲಿ ಬಹುಶ್ರೇಷ್ಠವಾದುದು. ದೇವರ ಅಸ್ತಿತ್ವದಲ್ಲಿ ನಂಬಿಕೆಯಿಲ್ಲದ ನಾಸ್ತಿಕನಾಗಿದ್ದವನು ಕಡೆಯಲ್ಲಿ ಹೀಗೆ ಆಸ್ತಿಕನೂ ಧಾರ್ಮಿಕನೂ ಆಗುತ್ತಾನೆ ಎಂಬುದೇ ಈ ಕೃತಿಯ ಮನಮುಟ್ಟುವ ಅಂಶ. ಯೇಸುಕ್ರಿಸ್ತನ ಬೆಟ್ಟದ ಮೇಲಿನ ಉಪದೇಶದಂತೆ ಬಾಳುವುದೊಂದೇ ಪರಮಧನ್ಯ ಮಾರ್ಗ ಎಂಬ ಸತ್ಯವನ್ನು ಕಂಡುಕೊಳ್ಳುತ್ತಾನೆ. ದ ಪವರ್ ಆಫ್ ಡಾರ್ಕ್‍ನೆಸ್ ಎಂಬ ಯಶಸ್ವಿಯಾದ ನಾಟಕ, ಮೂರನೆಯ ಮಹಾಕಾದಂಬರಿಯಾದ ರೆಸರಕ್ಷನ್ ಎಂಬುದು ಮೊದಲು ಬಂದ ಕೃತಿಗಳ ಮಟ್ಟಕ್ಕೆ ಬರಲಿಲ್ಲ. ಕಡೆಯಲ್ಲಿ ಬಂದ ಕೃತಿಗಳಲ್ಲಿ ಮಾಸ್ಟರ್ ಅಂಡ್ ಮ್ಯಾನ್ ಕಿರುಚಿತ್ರಗಳ ಸಂಕಲನ. ಇವುಗಳಲ್ಲಿ ನೈತಿಕ ವಿಚಾರಗಳ ಪರಿಶೀಲನೆ ತುಂಬಿದೆ. ವಾಟ್ ಈಸ್ ಆರ್ಟ್ (1896) ಎಂಬುದು ಕಲೆಯ ಅರ್ಥ ವಿಶೇಷತೆಗಳನ್ನು ಸರಳ ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ವಿವರಿಸುವ ಪುಸ್ತಕ. ನೆಪೋಲಿಯನ್‍ನನ್ನು ವಿರೋಧಿಸುವಷ್ಟೇ ಉಗ್ರವಾಗಿ ಷೇಕ್‍ಸ್ಪಿಯರ್‍ನನ್ನು ವಿರೋಧಿಸಿ ಬರೆದ ಲೇಖನವೂ ಇದರಲ್ಲಿದೆ.
	ದಸ್ತಾಯೆವ್‍ಸ್ಕಿ (1821 - 81) ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ, ತಂದೆ ಸೇನೆಯ ವೈದ್ಯನಾಗಿದ್ದಂತೆ ತಾನೂ ಸೇವಾ ನೌಕರಿಗೆ ಸೇರಿದರೂ ಕೆಲಕಾಲದಲ್ಲಿ ಅದನನು ಬಿಟ್ಟು ಬರೆಹಕ್ಕೆ ಕೈಹಾಕಿದ. ಜೂಜು, ಅಜಾಗರೂಕತೆಗಳಿಂದ ಸದಾ ಸಾಲಗಳಲ್ಲಿ ಮುಳುಗಿರುತ್ತಿದ್ದ. ಪೂರ್ ಫೋಕ್ (1846) ಈತನ ಮೊದಲ ಕಥೆ. ಬಡ ಗುಮಾಸ್ತನಾಗಿದ್ದವನೊಬ್ಬ ತನಗಿಂತ ಬಡವಳಾಗಿದ್ದ ಹುಡುಗಿಯನ್ನು ಪ್ರೀತಿಸುವ ಪ್ರಸಂಗ. ಭಾವನಾತ್ಮಕವಾಗಿದ್ದುದರಿಂದ ಬಹಳ ಜನಪ್ರಿಯವಾಯಿತು. ಕತೆಗಾರನಾಗಿ ಪ್ರಖ್ಯಾತನಾದ. ಭಾವಜೀವಿ, ಕನಸುಗಾರ ವಿಧಿಯ ಕ್ರೂರ ವಿಲಾಸಕ್ಕೆ ಸಿಕ್ಕುನರಳುವುದೇ ಈತನ ಕಥೆಗಳ ಸಾಮಾನ್ಯ ವಸ್ತು. 
(ನೋಡಿ- ದಸ್ತಯೇಫ್‍ಸ್ಕಿ,-ಫ್ಯೊದರ್ ಮ್ಯಿಕೈಲವ್ಯಿಚ್)
	1848 ರಲ್ಲಿ ರಾಜವಿರೋಧಿ ಗುಂಪಿನ ಸದಸ್ಯನಾಗಿದ್ದ ಕಾರಣ ಈತ ದಸ್ತಗಿರಿಯಾಗಿ ವಿಚಾರಣೆಯಾಗಿ ಮರಣದಂಡನೆಗೂ ಗುರಿಯಾದ. ಕೂದಲೆಳೆಯಷ್ಟು ಅಂತರದಲ್ಲಿ ಮರಣ ದಂಡನೆಯಿಂದ ಪಾರಾದ. ಈ ಮುನ್ನ 4 ವರ್ಷ ಕಠಿಣ ಸಜೆ ಅನುಭವಿಸಲು ಸೈಬೀರಿಯಕ್ಕೆ ಕಳಿಸಲಾಗಿತ್ತು. ಶಿಕ್ಷೆಯಲ್ಲಿ ಮಾರ್ಪಾಡಾಗಿ 8 ವರ್ಷಗಳು ಅಲ್ಲಿಯೇ ಇದ್ದು ರಷ್ಯಕ್ಕೆ ಹಿಂತಿರುಗಿದ. ಮತ್ತೆ ಬರೆವಣಿಗೆಯನ್ನು ಕೈಕೊಂಡ. ವಿಚಾರಗಳು ಬದಲಾಗಿ ಮಂದಗಾಮಿಯಾದವು. ಸೆರೆವಾಸದಿಂದ ಆರೋಗ್ಯ ಕ್ಷೀಣಿಸಿತು. ಆದರೂ ದ ವಿಲೇಜ್ ಸ್ತಿಪಾನ್ ಚೆಕಾಫ್ ಅ್ಯಂಡ್ ಇಟ್ಸ್ ಇನ್‍ಹ್ಯಾಬಿಟೆಂಟ್ಸ್, ದ ಹ್ಯುಮಿ ಲಿಯೇಟೆಡ್ ಅ್ಯಂಡ್ ಇನ್ಸಲ್ಟೆಡ್ ಎಂಬ ಉತ್ಕ್ರಷ್ಟ ಕಥೆಗಳನ್ನು ಬರೆದ. ಮೆಮಾಯರ್ಸ್ ಆಫ್ ಎ ಡೆಡ್ ಹೌಸ್ ಎಂಬುದು ಸೈಬೀರಿಯ ಕಾರಾಗೃಹ ಜೀವನದ ವಿಸ್ಮಯಕಾರಿ ಚಿತ್ರ. ಹಾಗೆಯೇ ಮೆಮಾಯರ್ಸ್ ಫ್ರಮ್ ಅಂಡರ್ ಗ್ರೌಂಡ್ ಎಂಬುದು ಸಾಹಿತ್ಯ ರೂಪ ತಳೆದ ಮಾನವ ಹೃದಯದ ಕಹಿ, ಆಕ್ರೋಶಗಳ ಪ್ರಚಂಡ ಪ್ರವಾಹ. ಇವನ ಕ್ರೈಮ್ ಅಂಡ್ ಪನಿಷ್ಮೆಂಟ್ ; ದ ಇಡಿಯಟ್ ; ದ ಡೆವಿಲ್ಸ್ ; ದ ಬ್ರದರ್ಸ್ ಕರಮಜೊವ್ - ಎಂಬ ನಾಲ್ಕು ಮಹಾಕಾದಂಬರಿಗಳು ಲೋಕವಿಖ್ಯಾತವಾಗಿದೆ.  ಇವಲ್ಲದೆ ದ ಗ್ಯಾಂಬ್ಲರ್ ; ದ ಇಟರ್ನಲ್ ಹಸ್ಬೆಂಡ್ ; ದ ರಾ ಯೂಥ್ ಎಂಬ ಕಾದಂಬರಿಗಳನ್ನು ಬರೆದ. ದಸ್ತಾಯೆವ್‍ಸ್ಕಿಯಂತೆ ಮಾನವ ಚೇತನದ ವಿಶ್ಲೇಷಣೆಯನ್ನು ಮಾಡಿದ ಲೇಖಕರು ಹಿಂದೆಯೂ ಇರಲಿಲ್ಲ. ಅನಂತರವೂ ಬರಲಿಲ್ಲ. ಕೇವಲ ಕಥೆಯ ಹೊರಮೈಯ ಬೆರಗಿನಲ್ಲಿ ತೃಪ್ತನಾಗದೆ ತನ್ನ ಪಾತ್ರಗಳ ಮೂಲಕ ಸುಪ್ತ ಮಾನಸದ ಆಳಕ್ಕಿಳಿದು ದೈವೀ ಮತ್ತು ಆಸುರೀ ಗುಣಗಳ ಸಂಘರ್ಷವನ್ನು ತರ್ಕಬದ್ಧ ವೈಚಾರಿಕ ದೃಷ್ಟಿಯಿಂದ ಅವಲೋಕಿಸುತ್ತಾನೆ. ಜೀವನದಲ್ಲಿ ಸುಖ, ಶಾಂತಿಗಳನ್ನು ಪಡೆಯಲು, ಪರಿತ್ಯಜಿಸಬೇಕಾದ ಅಂಶಗಳನ್ನು ಕಂಡುಕೊಳ್ಳುವ ವ್ಯಕ್ತಿಗಳನ್ನು ತನ್ನ ಕೃತಿಗಳಲ್ಲಿ ಚಿತ್ರಿಸುತ್ತಾನೆ. ಅತ್ಯಂತ ಒಳ್ಳೆಯ ವ್ಯಕ್ತಿಯಲ್ಲೂ ದುಷ್ಟತನದ ಅಂಶಗಳಿರುವುದನ್ನು ಅತ್ಯಂತ ಕೆಟ್ಟವನಲ್ಲೂ ಒಳ್ಳೆಯ ಅಂಶಗಳಿರುವುದನ್ನೂ ಗುರುತಿಸಿ ಯಾರನ್ನೂ ಹೀನಾಯವಾಗಿ ಕಾಣಬಾರದೆನ್ನುವ ಕ್ರೈಸ್ತ ಮನೋಧರ್ಮವನ್ನು ಎತ್ತಿ ಹಿಡಿಯುತ್ತಾನೆ. ಕೃತಿ, ಕರ್ಮ ಏನೇ ಇರಲಿ ಅದರ ಹಿಂದಿರುವ ಉದ್ದೇಶವನ್ನು ತಿಳಿದು ತೀರ್ಮಾನ ಕೊಡಬೇಕು ಎಂಬುದು ಇವನ ಅಭಿಮತ. ಲೋಕದ ರೀತಿಗೆ ಒಪ್ಪಿಕೊಂಡು ನೀತಿಗಾಗಿ ನೀತಿ ಎಂಬಂತೆ ನಡೆದುಕೊಳ್ಳಬೇಕು. ಕ್ರೌರ್ಯ, ಅಹಂಕಾರಗಳಿರುವಂತೆ ದಯೆ, ವಿನಯಗಳೂ ಬದುಕಿನಲ್ಲಿ ಸಹಜ ಹಾಗೂ ವಾಸ್ತವ ಸಂಗತಿಗಳು. ಪ್ರಪಂಚ ಸಾಹಿತ್ಯದ ಮೇಲೆ ಅದರಲ್ಲೂ ಆಧುನಿಕ ಕಾದಂಬರಿ ಪ್ರಕಾರದ ಮೇಲೆ ದಸ್ತಾಯೆವ್‍ಸ್ಕಿಯ ಬರೆಹಗಳು ಗಾಢವಾದ ಪ್ರಭಾವವನ್ನು ಬೀರಿವೆ.
	ದಸ್ತಾಯೆವ್‍ಸ್ಕಿ 1881 ರಲ್ಲಿ ಮರಣ ಹೊಂದಿದ. ಎರಡನೆಯ ಜಾರ್ ಅಲೆಗ್ಸಾಂಡರನನ್ನು ಹತ್ಯೆ ಮಾಡಿದರು. ಎರಡು ವರ್ಷಗಳ ಬಳಿಕ ತುರ್ಗೇನೆಫ್ ತೀರಿಹೋದ. ಟಾಲ್ಸ್‍ಟಾಯ್ 1910 ರ ವರೆಗೂ ಇದ್ದನಾದರೂ ರಷ್ಯದ ಕಾದಂಬರಿಯ ಮಹಾಯುಗ 1881 ರ ವೇಳೆಗೆ ಮುಗಿಯಿತು. ಆದರೂ ಸುಮಾರು ಹತ್ತು ವರ್ಷಕಾಲ ಅಂದರೆ 1890 ರ ವರೆಗೂ ಕಾದಂಬರಿ ಕ್ಷೇತ್ರದಲ್ಲಿ ಟಾಲ್ಸ್‍ಟಾಯ್‍ನ ಪ್ರಭಾವೇ ಪ್ರಬಲವಾಗಿತ್ತು.  ಈತನ ಸೊಗಸಾದ ಧಾರ್ಮಿಕ ಮತ್ತು ನೀತಿ ಬೋಧಕ ಕಥೆಗಳನ್ನು ಬಿಟ್ಟು ಕಾದಂಬರಿಗಳನ್ನು ಅನುಕರಿಸುವ ಗೀಳೇ ಅನೇಕ ಯುವ ಸಾಹಿತಿಗಳಲ್ಲಿ ಅಂಟಿಕೊಂಡಿತ್ತು.
	ಹೀಗೆ ಟಾಲ್ಸ್‍ಟಾಯ್ ಮತ್ತು ತುರ್ಗೇನೆಫ್ ಅವರಿಂದ ಪ್ರಭಾವಿತರಾದ ಹೊಸ ಪೀಳಿಗೆಯ ಲೇಖಕರಲ್ಲಿ ವಿ. ಎಂ. ಗಾರ್ಷಿನ್ ಅಗ್ರಪಂಕ್ತಿಯ ಶ್ರೇಷ್ಠ ಸಾಹಿತಿ. ಈತನ ಅಲ್ಪ ಕಾಲಾವಧಿಯ ಸೃಜನಶೀಲ ಜೀವನ ದುರಂತ ಮರಣದಲ್ಲಿ ಮುಗಿದು ಹೋಯಿತು. ಕ್ರಾಸ್ಯುತ್ಸೆವೆತಕ್‍ನ (1883) ದ ಸ್ಕಾಲೆಟ್ ಬ್ಲಾಜಮ್ ; ದ ಸಿಗ್ನಲ್ ಅಂಡ್ ಅದರ್ ಸ್ಟೋರೀಸ್ ಎಂಬ ಸಣ್ಣಕಥೆಗಳು ನೈತಿಕ ಸೂಕ್ಷ್ಮ ಭಾವಗಳನ್ನೊಳಗೊಂಡು ರೂಪ, ತಂತ್ರ, ಕಥನ ಶೈಲಗಳಿಂದ ಆಹ್ಲಾದಗೊಳಿಸುತ್ತವೆ. ರೋಗಗ್ರಸ್ತ ಭಾವದಲ್ಲಿದ್ದು ಬರೆಯುವುದೇ ಈತನ ಪ್ರಿಯವಾದ ಮನೋವೃತ್ತಿಯಾಯಿತು.
	ಉಗ್ರವಾದಿ ಬರೆಹಗಾರರಲ್ಲಿ ವಿ. ಜಿ. ಕೊರೊಂಲೆಕೊನ ಕತೆಗಳು ಗಮನವನ್ನು ಸೆಳೆಯುತ್ತವೆ. ಕತೆಗಾರ ಯಾವುದೊ ಪ್ರಕರಣದಲ್ಲಿ ಗಡೀಪಾರಾಗಿ ಸೈಬೀರಿಯಲ್ಲಿರಬೇಕಾಗಿ ಬಂದಾಗ ಅಲ್ಲಿನ ಜೀವನ, ಶೋಷಿತರ ಪಾಡು ಇತ್ಯಾದಿ ಚಿತ್ರಗಳನ್ನೂ ತನ್ನ ಅನುಭವಗಳನ್ನೂ ಸಣ್ಣಕತೆಗಳಲ್ಲಿ ಅಭಿವ್ಯಕ್ತಿಸಿ ಬರೆದ. ಮಾಕರ್ಸ್ ಡ್ರೀಮ್ ಅಂಡ್ ಅದರ್ ಸ್ಟೋರೀಸ್ (1892 ರಲ್ಲಿ ಇಂಗ್ಲಿಷ್ ಅನುವಾದ) ಒಂದು ಸೊಗಸಾದ ಕೃತಿ. ಅಭಿಜಾತ ಸಾಹಿತ್ಯಕ್ಕೆ ಸೇರಲು ಯೋಗ್ಯವಾದುದು. ಉತ್ತರದ ಹಿಮಾಚ್ಛಾದಿತ ರಮ್ಯ ನೋಟಗಳನ್ನೂ ಕಣ್ಣಿಗೆ ಕಟ್ಟುವಂತೆ ಈ ಕತೆಗಳಲ್ಲಿ ಬಣ್ಣಿಸುತ್ತಾನೆ. ಮನುಷ್ಯನ ಅಂತರಂಗದಲ್ಲಿರುವ ಸ್ವಾಭಾವಿಕ ಒಳ್ಳೆಯತನವೇ ಕೊನೆಗೆ ಗೆಲ್ಲುವುದು ಎಂಬ ಆದರ್ಶ ಈತನದು. ಇವನ ಕಥೆಗಳಲ್ಲಿ ವಾಸ್ತವತೆ- ಮಣ್ಣಿನ ವಾಸನೆಗಳಲ್ಲದೆ ಆಹ್ಲಾದಕರವಾದ ಹಾಸ್ಯವೂ ಬೆರೆತಿದೆ. ಈತನ ಶ್ರೇಷ್ಠ ಕಥೆಗಾರಿಕೆಯನ್ನು ಪ್ರತಿಭಾಶಾಲಿ ಚೆಕಾಫ್‍ನ ಕಥೆಗಳು ಮರೆಮಾಡಿದವು.
	ತುರ್ಗೇನೆಫ್, ಟಾಲ್ಸ್‍ಟಾಯ್, ದಸ್ತಾಯೆವ್‍ಸ್ಕಿಯವರಂತಹ ಮಹಾ ಸಾಹಿತಿಗಳ ಮುಂದೆ ಆ ಕಾಲದ ಇತರ ರಷ್ಯನ್ ಲೇಖಕರು ಕುಬ್ಜರಾಗಿ ಕಾಣುತ್ತಾರೆ. ಅಲೆಗ್ಸಾಂಡರ್ ನಿಕೊಲಯೆವಿಚ್ ಓಸ್ತ್ರೋವೆಸ್ಕಿ ನೆಕ್ರಸೊವ್ (1821 - 77) ಎಂಬ ಕವಿ, ಅಲೆಕ್ಸಿ, ಕಾನ್ಸ್‍ಟಾಂಟಿನೊವಿಚ್ ಟಾಲ್ಸ್‍ಟಾಯ್ (1817 - 75) ಎಂಬ ಕವಿ, ಮಿಹೈಲಿನ್ ಗ್ರಾಫೋವಿಚ್ ಸ್ತಲಿಕೋವ್ ಷೆದ್ರಿನ್ (1826 - 89) ಎಂಬ ವಿಡಂಬನಕಾರ ; ಅಲೆಕ್ಸಿ ಫಿಯಲಕ್ತೊವಿಚ್ ಪಿಸೆಮ್‍ಸ್ಕಿ (1820 - 81) ಎಂಬ ಸಂದೇಹವಾದಿ ; ನಿಕೊಲಯ್ ಸೆಮೆನೋವಿಚ್ ಲೈಯೆಸ್ಕೊವ್ (1831 - 95) ಎಂಬ ಕಾದಂಬರಿಕಾರ ಹಾಗೂ ಪ್ರಬಂಧಕಾರ - ಈ ಮುಂತಾದವರು ಹುಟ್ಟಿದ ಅವಧಿ ಮಹಾಲೇಖಕರಿದ್ದ ಅದ್ಭುತವಾದ ಕಾಲ. ಸಾಮಾಜಿಕ ಹಾಗೂ ಪೌರಪ್ರಜ್ಞೆ ಸಾಹಿತ್ಯದಲ್ಲಿ ಅಭಿವ್ಯಕ್ತವಾದ ಕಾಲ. ಈ ಕಾಲದಲ್ಲಿ ರೈತ ಕಾರ್ಮಿಕರ ಬಗ್ಗೆ, ಶ್ರಮಜೀವಿಗಳ ಬಗ್ಗೆ ಸಹಾನುಭೂತಿ ಬೆಳೆಯಿತು.
	ಅಂತೋನ್ ಪಾವ್ಲೊವಿಚ್ ಚೆಕಾಫ್ 91860 - 1904) ಬರೆಯಲಾರಂಭಿಸಿದ್ದು 1880 ರ ಸುಮಾರಿನಲ್ಲಿ, ರಷ್ಯನ್ ಸಾಹಿತ್ಯ ಲೋಕವನ್ನು ಒಂದು ಬಗೆಯ ಮ್ಲಾನತೆ ಆವರಿಸಿದ್ದ ಕಾಲದಲ್ಲಿ. ಚೆಕಾಫ್ ಮಾಸ್ಕೊದಲ್ಲಿ ವೈದ್ಯ ಶಿಕ್ಷಣವನ್ನು ಪಡೆಯುತ್ತಿದ್ದ. ಮೊದಲಲ್ಲಿ ಹಾಸ್ಯ ಕಥೆಗಳನ್ನು ಬರೆಯುತ್ತಿದ್ದ. ಅನಂತರ ಬರೆದ ನಾಟಕ, ಸಣ್ಣಕಥೆಗಳಲ್ಲೂ ಈ ಹಾಸ್ಯಾಭಿರುಚಿ ಹರಿಯಿತು. ಮಾಸ್ಕೊದ ಆರ್ಚ್ ಥಿಯೇಟರ್‍ಗೆ ಬೇಕಾದ ನಾಟಕಗಳನ್ನು ಬರೆಯತೊಡಗಿದ. ದ ಗಲ್, ಅಂಕಲ್‍ವಾನ್ಯಾ, ದ ತ್ರೀ ಸಿಸ್ಟರ್ಸ್, ದ ಚೆರಿ ಆರ್ಚ್‍ರ್ಡ್ ಎಂಬ ಉತ್ಕøಷ್ಟ ನಾಟಕಗಳು ಬಂದವು. ಚೆಕಾಫ್ ದೊಡ್ಡ ಭರವಸೆಯನ್ನು ನೀಡಿದ. ಆದರೆ ಕ್ಷಯರೋಗದಿಂದ ಅಕಾಲ ಮರಣಕ್ಕೀಡಾದ.
	ಸಾಹಿತ್ಯದ ಬೆಳವಣಿಗೆಗೆ ಉತ್ಸಾಹ - ಪ್ರೋತ್ಸಾಹಗಳಿಲ್ಲದೆ ಕುಗ್ಗಿದ ಈ ಕಾಲದಲ್ಲಿ ಉತ್ತಮ ಸಾಹಿತ್ಯ ಸೃಷ್ಟಿಗೆ ಪ್ರಬಲವಾದ ಬೇರೊಂದು ಪ್ರೇರಣೆ ಬೇಕಿತ್ತು. 1890ರ ದಶಕದ ನಡುವೆ ತಲೆಯೆತ್ತತೊಡಗಿದ ಮಾಕ್ರ್ಸ್‍ವಾದ ಕೃಷಿಕ ಜಗತ್ತಿನಿಂದ ಕಾರ್ಖಾನೆಗಳ ಕಾರ್ಮಿಕ ಜಗತ್ತಿನ ಕಡೆ ದೃಷ್ಟಿ ಹರಿಸಿ ಹೊಸ ಯುಗದ ಉದಯವನ್ನು ಸೂಚಿಸಿತು. ಈ ಬದಲಾವಣೆಯ ಪ್ರವರ್ತಕ ಮ್ಯಾಕ್ಸಿಂಗಾರ್ಕಿ (ಅಲೆಕ್ಸಿ ನಿಕಲಯೆವಿಚ್ ಪಿಯೆಷ್‍ಕಾಪ್, 1869 - 1939). ಈತ ನಿಜ್ನಿನವ್ ಗೊರೊದ್‍ನ ಜೋಪಡಿಹಟ್ಟಿಯಲ್ಲಿ ಹುಟ್ಟಿ ಬೆಳೆದ. ಇತ್ತ ಕೃಷಿಕರ ನಿಷ್ಕ್ರಿಯೆ ಅತ್ತ ಬುದ್ಧಿಜೀವಿಗಳ ನಿಷ್ಕ್ರಿಯೆ, ಈ ಎರಡನ್ನೂ ತುಚ್ಛೀಕರಿಸಿ ಕೂಲಿಕಾರ ದೀನದಲಿತರ ಬೆಂಬಲಿಗನಾಗಿ ಕಥೆ ಬರೆದ. ಈ ಕಥೆಗಳ ಹೊಸತನ, ಹೊಸ ಆಲೋಚನೆ ಜನರ ಮನಸೆಳೆದವು. ಸಾಮಾಜಿಕ ಸಮತಾವಾದ, ಕ್ರಾಂತಿವಾದಗಳನ್ನು ಅನುಮೋದಿಸಿ ಬರೆದ ಕದಂಬರಿಗಳು ಸಣ್ಣಕಥೆಗಳಷ್ಟು ಚೈತನ್ಯಶೀಲವಾಗಲಿಲ್ಲ. ದ ಲೋಯರ್ ಡೆಪ್ಸ್ತ್ ಎಂಬ ನಾಟಕ ತುಂಬಾ ಜನಪ್ರಿಯವಾಯಿತು. 1913 ರಲ್ಲಿ ಶೈಲಿಯು ಬದಲಾಗಿ ಚೈಲ್ಡ್‍ಹುಡ್, ಎಮಾಂಗ್ ಪೀಪಲ್, ಮೈ ಯೂನಿವರ್ಸಿಟಿ ಡೇಸ್ ಎಂಬ ಆತ್ಮಕಥಾರೂಪದ ಮೂರು ಉತ್ಕ್ರಷ್ಟ ಗ್ರಂಥಗಳು ಬಂದವು. 1917 ರಲ್ಲಿ ರಷ್ಯ ಕ್ರಾಂತಿಯಾದಾಗ ರಷ್ಯದ ಪ್ರಾಚೀನ ಸಂಸ್ಕøತಿಯ ರಕ್ಷಣೆಗೆ ಕಂಕಣತೊಟ್ಟುನಿಂತ. ಸಮಾಜವಾದದ ಹೊಸಯುಗದ ಸಾಹಿತಿಯಾದರೂ ತನ್ನ ಕೊನೆಯ ಕಾದಂಬರಿ ಲೈಫ್ ಆಫ್ ಕ್ಲಿಮ್ ಸಾಮಗಿನ್‍ನಲ್ಲಿ ಕ್ರಾಂತಿಪೂರ್ವದ ರಷ್ಯದ ಚಿತ್ರವನ್ನೇ ಕೊಟ್ಟಿದ್ದಾನೆ.
	ಲಿಯೊನಿದ್ ನಿಕಲಯೆವಿಚ್ ಆಂದ್ರೆಯೆವ್ (1871 - 1919) ಅತ್ಯಂತ ಜನಪ್ರಿಯ ಲೇಖಕ. ಜೀವನದ ವಿಫಲತೆ, ಶೂನ್ಯತೆಗಳನ್ನೇ ಚಿತ್ರಿಸುವ ಲೇಖಕರಲ್ಲಿ ಅಗ್ರಗಣ್ಯ, ಇತರ ಹಲವಾರು ಲೇಖಕರು ಗಾರ್ಕಿಯಿಂದ ಪ್ರಭಾವಿತರಾದರು. ಅಲೆಗ್ಸಾಂಡರ್ ಇವ್ಯಾನೊವಿಚ್ ಕುಪ್ರಿನ್ (1870 - 1939) ಯಾವೊಂದು ಧ್ಯೇಯ ಆದರ್ಶಗಳ ಗೋಜಿಲ್ಲದೆ ಸಂತೋಷವಾಗಿ ಓದಿಸಿಕೊಂಡು ಹೋಗುವ ಹಲವಾರು ಬಗೆಯ ಪುಸ್ತಕಗಳನ್ನು ಬರೆದು ಜನಪ್ರಿಯನಾದ. ಇವ್ಯಾನ್ ಅಲೆಕ್ಸ್‍ಯೆವಿಚ್ ಬ್ಯೂನಿನ್ (1870) ಈ ಕಾಲದ ದೊಡ್ಡ ಸಾಹಿತಿ. ದ ವಿಲೇಜ್ ಎಂಬ ಕಾದಂಬರಿಯಲ್ಲಿ ಜಮೀನ್ದಾರಿ ಪದ್ಧತಿ ನಶಿಸಿಹೋಗುತ್ತಲೇ ಬದಲಾದ ಹೊಸ ಸಮಾಜವನ್ನು ಚಿತ್ರಿಸುತ್ತಾನೆ. ಈತನ ದ ಜೆಂಟ್ಲ್‍ಮನ್ ಫ್ರಮ್ ಸ್ಯಾನ್‍ಫ್ರಾನ್ಸಿಸ್ಕೊಗೆ ನೊಬೆಲ್ ಬಹುಮಾನ ಬಂದಿತು. ಮಿಹೈಲ್ ಪೆಟ್ರೋವಿಚ್ ಆರ್ಟ್ ಸಿಬಾಷ್‍ವ್ (1878 - 1927) ಸಮಸ್ತ ಯೂರೋಪನ್ನೇ ಬಿರುಗಾಳಿಯಂತೆ ಆವರಿಸಿದ ಸ್ಯಾನಿನ್ ಗ್ರಂಥದಂಥಹ ಲೈಂಗಿಕ ಕಥೆಗಳನ್ನು ಬರೆದ.
	ಮಾಕ್ರ್ಸ್‍ತತ್ತ್ವದಿಂದ ಪ್ರಭಾವಿತರಾಗದ ಲೇಖಕರು ಸಾಹಿತಿಗಳನ್ನು ನಿರ್ಬಂಧಿಸಿದ್ದ ಸಮಾಜೋದ್ಧಾರ ಉದ್ದೇಶಗಳ ಸಂಕೋಲೆಗಳನ್ನು ಕಿತ್ತೆಸೆದು ಕಲೆಗಾಗಿ ಕಲೆ ಎಂಬ ನಿಲುವನ್ನು ತಳೆದರು. ರಷ್ಯದ ಬದುಕಿನ ರೀತಿಯಲ್ಲಿ ಫ್ರೆಂಚ್ ಮಾದರಿ ಸಾಂಕೇತಿಕ ಬರೆವಣಿಗೆ ಸಮೃದ್ಧ ಸಾಮಾಗ್ರಿಯನ್ನು ಕಂಡರು. ಬರೆವಣಿಗೆಯ ತಂತ್ರ, ಶೈಲಿಗಳನ್ನು ಉತ್ತಮಗೊಳಿಸಿದರು. ಪ್ರಾದೇಶಿಕತೆ, ರಾಷ್ಟ್ರೀಯತೆಗಳ ಸೀಮಾರೇಖೆಗಳನ್ನು ದಾಟಿ ತ್ರಿಕಾಲಾಬಾಧಿತ - ಸಾರ್ವತ್ರಿಕ ವಸ್ತುಗಳನ್ನು ಬರೆಹಕ್ಕೆ ಆರಿಸಿಕೊಂಡರು.
	ಈ ಬಗೆಯ ಸಾಹಿತಿಗಳಲ್ಲಿ ಹೆಸರಿಸಬಹುದಾದವನು ಡಿಮಿಟ್ರಿ ಸೆರ್ಗೆಯೆವಿಚ್ ಮೆರೆಜ್‍ಕೊವ್‍ಸ್ಕಿ (1866 - 1942). ಕ್ರೈಸ್ಟ್ ಅಂಡ್ ಆ್ಯಂಟಿ ಕ್ರೈಸ್ಟ್ ಎಂಬ ಕಾದಂಬರಿ ತ್ರಯ ಸರಣಿಯನ್ನು (ದ ಡೆತ್ ಆಫ್ ಗಾಡ್ಸ್, ದ ರಿಸರೆಕ್ಷನ್ ಆಫ್ ದ ಗಾಡ್ಸ್, ಪೀಟರ್ ಅಂಡ್ ಅಲೆಕ್ಸಿ) ಬರೆದ. ಬರೆವಣಿಗೆಯ ತೀರಾ ವೈಚಾರಿಕವಾಗಿದ್ದು ಆಲೋಚನೆಗಳು ಹಲವೆಡೆ ಅಸ್ಪಷ್ಟವಾಗಿದೆ. ದಿಮಿತ್ರಿಯೆವಿಚ್ ಬಲ್ಮಾಂಟ್ (1867 - 1943), ವ್ಯಾಲೆರಿ ಯಕೊವ್‍ಲೆವಿಚ್ ಬ್ರಿಯುಸೊವ್ (1873 - 1924) ಉತ್ತಮ ದರ್ಜೆಯ ಕವಿಗಳು. ಬ್ರಿಯುಸೊವ್‍ನ ಕವನ ಸಂಕಲನಗಳಾದ ದ ರಿಪಬ್ಲಿಕ್ ಆಫ್ ದ ಸದರ್ನ್ ಕ್ರಾಸ್, ದ ಫೈರಿ ಏಂಜಲ್, ಆನ್ ದ ಆಲ್ಟರ್ ಆಫ್ ವಿಕ್ಟರೀಸ್ - ಕವಿಯ ಕಲ್ಪನೆಯ ಹವೆಯನ್ನು ತೋರಿಸುತ್ತದೆ.
	ಬೋರಿಸ್ ನಿಕಲಯೆವಿಚ್ ಬ್ಯುಗಾಯೆವ್ (1880 - 19340 ಪ್ರತಿಭಾವಂತ ಕವಿ, ವಿಮರ್ಶಕ. ರುಡುಲ್ಫ್ ಸ್ಟೇನರ್‍ನ ಮಾನವಶಾಸ್ತ್ರ ಅಧ್ಯಯನದ ಗೀಳು ತುಂಬಿದ್ದ ಈತನ ಬರೆಹಗಳು ವಿದ್ಯಾವಂತರಿಗೂ ಅರ್ಥವಾಗದಷ್ಟು  ಕ್ಲಿಷ್ಟವಾಗಿವೆ. ಈತನ ದ ಸಿಲ್ವರ್ ಡೊವ್ ಎಂಬ ಕೃತಿ ರಷ್ಯನ್ ಸಮಾಜದಲ್ಲುಂಟಾದ ಪೂರ್ವ ಪಶ್ಚಿಮ ಸಂಸ್ಕøತಿಗಳ ಘರ್ಷಣೆಯ ಸೊಗಸಾದ ಅಧ್ಯಯನವಾಗಿದೆ.
	ಕವಿ, ಅನುಭಾವಿ, ತತ್ತ್ವಜ್ಞಾನಿ - ವ್ಲಾದಿಮಿರ್ ಸೆರ್ಗೆಯೆವಿಚ್ ಸೋಲೊಯೆವ್‍ನ (1853 - 1900) ಕೃತಿ `ತ್ರೀ ಕಾನ್ವರ್ಸೇಷನ್ಸ್ ವಿಥ್ ದ ವಿಜನ್ ಆಫ್ ಆ್ಯಂಟಿ ಕ್ರೈಸ್ಟ್‍ವ್‍ಸಿ ಗಮನಾರ್ಹ ಗದ್ಯಗ್ರಂಥ. ಚಿರಂತನ ಸ್ತ್ರೀತ್ವವನ್ನು ಸಂಕೇತಿಸುವ ಸಫೈಯಳಿಗೆ (ಈತನ ಕಾಲ್ಪನಿಕ ಸಖಿ) ಬರೆದ ಅನುವಾದ ರೀತಿಯ ಪ್ರೇಮಗೀತೆಗಳು ಸಾಂಕೇತಿಕ ಪಂಥದ ಬೆಳವಣಿಗೆಯ ಮೇಲೆ ಪ್ರಬಲವಾದ ಪ್ರಭಾವ ಬೀರಿದವು. ಆ ಪಂಥದ ಅತಿ ದೊಡ್ಡ ಕವಿ ಅಲೆಗ್ಸಾಂಡರ್ ಅಲೆಕ್ಸಾಂದ್ರೊವಿಚ್ ಬ್ಲಾಕ್ (1880 - 1921) ಈ ಪ್ರಭಾವದಲ್ಲಿ ವಿಕಾಸಗೊಂಡವನು. ಆತ ಕನಸು ಕಾಣುತ್ತಿದ್ದುದೂ ಸಫೈಯಳಂತೆ ಚಿರಂತನ ಸ್ತ್ರೀತ್ವ ಸಂಕೇತವಾದ ಕಾಲ್ಪನಿಕ ಸುಂದರಿಯನ್ನೇ. ಫೇರ್‍ಲೇಡಿ, ಮುದ್ದು ಗೆಳತಿ, ಚೆಲುವೆ ಎಂದು ಆಕೆಯನ್ನು ಕಲ್ಪಿಸಿಕೊಳ್ಳುವ ಕವಿ ರಷ್ಯ ದೇಶವನ್ನು ದೇವಿ ರೂಪದಲ್ಲಿ ದರ್ಶಿಸಿಕೊಂಡಾಡುತ್ತಾನೆ. ದ ಟ್ವೆಲ್ವ್ ಎಂಬ ಕಾವ್ಯದಿಂದ ರಷ್ಯ ಕ್ರಾಂತಿಯನ್ನು ಸ್ವಾಗತಿಸಿದ. ಇದೊಂದು ರಷ್ಯನ್ ಸಾಹಿತ್ಯದ ಶ್ರೇಷ್ಠ ಕಾವ್ಯ. ದ ಸಿಥಿಯನ್ಸ್ ಎಂಬ ಕಾವ್ಯ ರಷ್ಯದ ಸ್ನೇಹ ಗಳಿಸಿರಿ, ಇಲ್ಲವಾದರೆ ಪರಿಣಾಮ ಒಳ್ಳೆದಾಗದು ಎಂದು ಪಶ್ಚಿಮ ರಾಷ್ಟ್ರಗಳಿಗೆ ಕೊಡುವ ಎಚ್ಚರಿಕೆ.
	ಕ್ರಾಂತಿಗೆ ಕೊಂಚ ಮುನ್ನ ನಾನಾ ಕಾವ್ಯಪಂಥಗಳು ಹುಟ್ಟಿಕೊಂಡಿದ್ದವು. ಸ್ಪಷ್ಟ ಪ್ರತಿಮೆಗಳ, ಇತ್ಯಾತ್ಮಕ ಮನೋಧರ್ಮದ ಕಾವ್ಯಪಂಥದ ನಾಯಕ ನಿಕಲಾಯ್ ಸ್ಟಿಪಾನೊವಿಚ್ ಗುಮಿಲೆವ್ (1886 - 1921). ಇವನ ವಿವಾಹವಿಚ್ಛೇದಿತ ಪತ್ನಿ ಸುಪ್ರಸಿದ್ಧ ಕವಯಿತ್ರಿ - ಅನ್ನಾ ಅಖ್‍ಮತೊವ್ (1889) ; ಓಸಿಪ್ ಎಮಿಲಿವಿಚ್ ಮ್ಯಾಂಡೆಲ್ ಸ್ಟಾಮ್, ಅಹಂ - ಸ್ವೇಚ್ಛಾ ಸಂಕೇತಾನುವರ್ತನವಾದಿ ಪಂಥದ ನಾಯಕ ಇಗೊರ್ ಸೆವೆರ್ಯಾನಿನ್ (ಇಗೊರ್ ವ್ಯಾಸಿಲ್ಯವಿಚ್‍ಲಟರಾಫ್, 1887 - 1942), ಅರ್ಥಾತೀತ ಕಾವ್ಯ ಪಂಥದ (ಟ್ರಾನ್ಸ್ ಸೆನ್ಸ್) ಕ್ರುಚೊನಿಖ್‍ನ ಕಾವ್ಯ ಒಂದು ಹೊಸ ಪ್ರಯೋಗ ; ಅರ್ಥವಾಗದ ಹೊಸ ಪದಗಳನ್ನು ರಚಿಸಿ ಕಾವ್ಯದಲ್ಲಿ ಬಳಸುವುದು. ಸ್ವೇಚ್ಛಾ - ಸಂಕೇತಾನುವರ್ತನವಾದಿ ಪಂಥದನಾಯಕ ವ್ಲಾದಿಮಿರ್ ಮಯಕೋವ್‍ಸ್ಕಿ (1893 - 1930) ಕ್ರಾಂತಿಯ ಅನಂತರ ಬೆಳೆದ ಕವಿ. ಒಂದನೆಯ ಮಹಾಯುದ್ಧ ಕಾಲದಲ್ಲಿ ರಷ್ಯ ಮಿತ್ರ ರಾಷ್ಟ್ರಗಳನ್ನು ಬೆಂಬಲಿಸಿದ ಕವಿಗಳು ಬಹುವಿರಳ. ಲಿಯೊನಿದ್ ಆಂದ್ರೆಯೆವ್ ಅಂತಹವರಲ್ಲಿ ಒಬ್ಬ. ಕ್ರಾಂತಿಯಾದಾಗ ಅನೇಕ ಉದಾರವಾದಿ ಕವಿಗಳು ದೇಶವನ್ನು ಬಿಟ್ಟು ಹೋದರು.
	ಪೀಟರ್ ನಿಕಲಯೆವಿಚ್ ಕ್ರಾಸ್‍ನೊವ್‍ನ ಫ್ರಮ್ ದ ಟೂ ಹೆಡೆಟ್ ಈಗಲ್ ಟು ದ ರೆಡ್ ಫ್ಲ್ಯಾಗ್ ಎಂಬ (ಕ್ರಾಂತಿಯ ಅನಂತರದ ಸೋವಿಯೆತ್ ಓದುಗರಿಗೆ ಪ್ರಿಯವಾದ) ಪುಸ್ತಕವನ್ನು ಬಿಟ್ಟರೆ ಹೊಸ ಸಮಾಜ ನಿರ್ಮಾಣದಿಂದ ಸ್ಫೂರ್ತಿತವಾದ ಶ್ರೇಷ್ಠ ಸಾಹಿತ್ಯ ರಚನೆಯಾಗದೆಹೋದುದು ಆಶ್ಚರ್ಯದ ಸಂಗತಿ. ಹೊಸಕಾಲದ ಮೊದಲಲ್ಲಿ ಬರೆದವರು ಸಹ ಹಳೆಯ ರಷ್ಯದ ಜೀವನ ಮತ್ತು ಸಂಸ್ಕøತಿಗಳನ್ನೇ ವೈಭವೀಕರಿಸಿದರು.
	20 ನೆಯ ಶತಕದ ಮೊದಲ ಮೂರು ದಶಕಗಳಲ್ಲಿ ಇಂಗ್ಲಿಷಿನಲ್ಲಿ ಬರೆಯತೊಡಗಿದ ಸಿರಿನ್ ನೆಬಕೋವ್ (1899), ಆಲ್ಡನೊವ್ (1886), ರೈತ ಕವಿ ಸರ್ಗೆಯೆಸನಿನ್ (1895 - 1925), ವ್ಲಾದಿಮಿರ್ ಮಯಕೋವ್‍ಸ್ಕಿ - ಈ ಕೆಲವರನ್ನು ಬಿಟ್ಟರೆ ಹೇಳಿಕೊಳ್ಳುವಂತಹ ಶ್ರೇಷ್ಠ ಸಾಹಿತಿಗಳು ಯಾರು ಬರಲಿಲ್ಲ.
	ರಷ್ಯದ ಕ್ರಾಂತಿಯ (1917) ಅನಂತರ ಸಾಹಿತ್ಯ ಮತ್ತು ಕಲೆಗೆ ಸಂಬಂಧಿಸಿದ ಚಿಂತನೆಯಲ್ಲಿಯೇ ಅನೇಕ ಬದಲಾವಣೆಗಳುಂಟಾದವು. ಅನೇಕ ಪ್ರಯೋಗಗಳು ನಡೆದವು. ಇದಕ್ಕೆ ಕಮ್ಯುನಿಸ್ಟ್ ಸಾಹಿತ್ಯ ಅಥವಾ ಕಮ್ಯುನಿಸ್ಟ್ ಕಲೆ ಎನ್ನಬಹುದು. ಸಾಹಿತ್ಯದಲ್ಲಿ ಸಂಪ್ರದಾಯಸ್ಥರು ಒಂದು ಕಡೆ, ಶ್ರಮಜೀವಿಗಳ ಸಂಸ್ಕøತಿಯ ಪ್ರತಿಪಾದಕರು ಮತ್ತೊಂದು ಕಡೆ ಹೀಗೆ ಎರಡು ಗುಂಪುಗಳಾದವು. ಸರ್ಜೆ ಎಸೆನಿನ್ (1895 - 1925) ಸಮಷ್ಟಿ ಬೇಸಾಯದಿಂದ ಹಳ್ಳಿಗಳಲ್ಲಿ ಬರಲಿರುವ ಸುಖಸಂತೋಷಗಳನ್ನು ಸಾಂಪ್ರದಾಯಿಕ ರೀತಿಯ ಭಾವಗೀತೆಗಳಲ್ಲಿ ತುಂಬಿದ. ಮಯಕೋವ್‍ಸ್ಕಿ ಹಿಂದಿನ ಸಂಪ್ರದಾಯಗಳನ್ನು ಕಿತ್ತೊಗೆದು, ಮುನ್ನೋಟ ಬೀರಿ ಸಂಘಶಕ್ತಿಯಿಂದ ಶ್ರಮಜೀವಿವರ್ಗ ಬಲಗೊಳ್ಳುವುದೆಂದು ನಂಬಿದ. ರಷ್ಯದಲ್ಲಿ ಅಂತರ್ಯುದ್ಧದ ಹಿಂಸಾಕೃತ್ಯಗಳು, ಗೆರಿಲ್ಲಾ ಯುದ್ಧಗಳ ಬಗ್ಗೆ ಅನೇಕ ಬರೆಹಗಳು ಬಂದವು. ಬುಡೆನ್ನಿಯ ಕೊಸಾಕ್ ಸೈನ್ಯದ ಕತೆಗಳಲ್ಲಿ ಯಥಾರ್ಥತೆ ಹಾಗೂ ನಿರೂಪಣೆಯಲ್ಲಿ ನಾಜೂಕು ಇದೆ. ಬೋರಿಸ್ ಪಿಲ್ನಕ್‍ನ ಕತೆಗಳಲ್ಲಿ ಅಂತರ್ಯುದ್ಧದ ಕಾಲದಲ್ಲಿ ಹೇಗೆ ಸಮಾಜ ಅವನತಿಗಿಳಿಯಿತು ಎಂದು ತಿಳಿಯುತ್ತದೆ. ಹೊಸದು ಹಳತರ ನಡುವಣ ತೊಳಲಾಟ, ಪ್ರಾಜ್ಞರು ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದರಲ್ಲಿ ಎದುರಿಸಿದ ದುರಂತ ಸಮಸ್ಯೆಗಳನ್ನು ಕಾನ್‍ಸ್ಟಾನ್‍ಟಿನ್ ಫೆಡಿನ್ (1892) ಚಿತ್ರಿಸಿದ್ದಾನೆ. ಈ ಬರೆಹಗಾರರ ಮೇಲೆ ಟಾಲ್ಸ್‍ಟಾಯ್, ದಸ್ತಾಯೇವ್‍ಸ್ಕಿ, ಚೆಕಾಫ್ - ಇವರುಗಳ ಪ್ರಭಾವ ಸ್ಪಷ್ಟವಾಗಿದೆ. ಬರೆವಣಿಗೆಯ ಮೇಲೆ ಸರ್ಕಾರದ ಹತೋಟಿ ಇಲ್ಲದಿದ್ದಾಗ ವಿಡಂಬನೆ ಬೆಳೆದು ಸೋವಿಯೆತ್ ಜೀವನದ ನ್ಯೂನತೆಗಳನ್ನು ವ್ಯಾಲಂಟಿನ್ ಕಟಾಯೆವ್ (1897) ಮತ್ತು ಮೈಕೇಲ್ ಜೋರೊಸೆಂಕೋ ನಿರೂಪಿಸಿದ್ದಾರೆ.
	ಆಧುನಿಕ ಕಮ್ಯುನಿಸ್ಟ್ ಸಾಹಿತ್ಯದ ಎರಡನೆಯ ಮೈಲಿಗಲ್ಲು ರಷ್ಯದ ಪಂಚವಾರ್ಷಿಕ ಯೋಜನೆಯ ಯಶಸ್ಸಿಗೆ ಸಂಬಂಧಿಸಿದ ಸಾಹಿತ್ಯ. ಇಲ್ಲಿಯೂ ಬರೆಹಗಾರರಲ್ಲಿ ಎರಡು ಬಣಗಳು. ಕ್ರಿಯಾತ್ಮಕ ಸ್ವಯಂ ನಿರ್ಧಾರವಾದಿಗಳೊಂದು ಗುಂಪು. ಎಡಪಕ್ಷದವರು ಮತ್ತೊಂದು ಗುಂಪು. ಪ್ರಥಮ ಪಂಚವಾರ್ಷಿಕ ಯೋಜನೆಯ ಪ್ರಗತಿಗೆ ಎಲ್ಲಾ ರೀತಿಯ ಬೆಂಬಲದ ಅಗತ್ಯವಿದ್ದಿತು. ಕಲೆ, ಸಾಹಿತ್ಯ ಕೂಡ ರಾಷ್ಟ್ರನಿರ್ಮಾಣ, ಸಮಷ್ಟಿ ಬೇಸಾಯ ಇವುಗಳ ಯಶಸ್ಸನ್ನು ಹಾಡಬೇಕಾಯಿತು. ಫೆಡಾರ್ ಗ್ಲಾಡ್‍ಕೋವ್ (1883 - 1958) ಹಾಗೂ ಮೈಕೇಲ್ ಷೊಲೋಖೋವ್ (1905 - ) ಹೀಗೆ ಬರೆದವರಲ್ಲಿ ಮುಖ್ಯರು. ಷೊಲೋಖೋವ್‍ನ ಹಾರ್ವೆಸ್ಟ್ ಆನ್ ದ ಡಾನ್ ಎಂಬ ಕಾದಂಬರಿಯಲ್ಲಿ ಸಮಷ್ಟಿ ಬೇಸಾಯವನ್ನು ವ್ಯವಸ್ಥೆ ಮಾಡುವುದರಲ್ಲಿ ನಾಟಕ ಸಹಿಸಿದ ಜಯಾಪಜಯಗಳು ನಿರೂಪಿತವಾಗಿವೆ. ಲಿಯೊನಿದ್ ಲಿಯೊನಿವ್ (1899)ಸಾಟ್ ಎಂಬ ಕಾದಂಬರಿಯಲ್ಲಿ ಸಾಮಾಜಿಕ ಕಟ್ಟಳೆಗಳಿಗೆ ಬದ್ಧರಾಗಲು ವ್ಯಕ್ತಿಗಳು ನಡೆಸುವ ಹೋರಾಟವನ್ನು ಚಿತ್ರಿಸಿದ್ದಾನೆ. ಪಂಚವಾರ್ಷಿಕ ಯೋಜನೆಯನ್ನು ವಸ್ತುವಾಗುಳ್ಳ ಅನೇಕ ಪದ್ಯ, ನಾಟಕಗಳಿದ್ದರೂ ಅವೆಲ್ಲ ಪ್ರಚಾರ ಸಾಹಿತ್ಯಗಳು.
	ಸಾಹಿತ್ಯ ಗತಿ ಸಮಾಜವಾದದ ಯಥಾರ್ಥತೆಯನ್ನು ಬಣ್ಣಿಸುವುದೇ ಆಯಿತು. ಆದರೂ ರಷ್ಯದ ಶ್ರಮಜೀವಿಗಳಿಗೆ ಸಹಾನುಭೂತಿ ತೋರುವ ಬರೆಹಗಾರರ ಕೇಂದ್ರ ಸಂಸ್ಥೆ ಆರಂಭವಾಗಿ ಅದು ಸಾಹಿತ್ಯದ ರಾಜಕೀಯಕ್ಕೆ ಹಾಗೂ ಪಕ್ಷದ ಉದ್ದೇಶಗಳಿಗೆ ಹೊಂದಿಕೊಂಡಿರಬೇಕೆಂಬುದು ಸಾರಿದ್ರ. ಆದರೂ ಬರೆಹಗಾರರಿಗೆ ಸ್ವಾತಂತ್ರ್ಯವಿದ್ದುದರಿಂದ ಷೊಲೋಖೋವ್, ಲಿಯೊನಿವ್ ಮೊದಲಾದವರ ಕಾದಂಬರಿಗಳಲ್ಲಿ ಸಮಾಜವಾದದ ನ್ಯೂನತೆಗಳು ಎದ್ದು ಕಾಣುತ್ತವೆ. ಷೊಲೋಖೋವ್‍ನ ಕಾದಂಬರಿಯಲ್ಲಿ ನಾಯಕ ತನ್ನ ಅಚಲ ನಿರ್ಧಾರಗಳನ್ನು ಬದಲಾಯಿಸದೆ ಇದ್ದು ದುರಂತದಲ್ಲಿ ಕೊನೆಗಾಣುತ್ತಾನೆ. ಲಿಯೊನಿವ್‍ನ ರೋಡ್ ಟು ದಿ ಓಷನ್ ಎಂಬ ಕಾದಂಬರಿಯಲ್ಲಿ ನಾಯಕನಿಗೆ ಕಮ್ಯೂನಿಸಂನಲ್ಲಿ ಅಚಲ ಶ್ರದ್ಧೆಯಿದ್ದರೂ ತಾನು ಮಾಡುತ್ತಿರುವ ತ್ಯಾಗದ ಬಗ್ಗೆ ಸಂತೋಷವಿಲ್ಲದೆ, ಆ ನೆನಪಿನಿಂದಲೇ ದುಃಖಿಯಾಗುತ್ತಾನೆ. ಫೆರ್ಡಿನ್‍ನ ಕಾದಂಬರಿಗಳಲ್ಲಿ ಪಕ್ಷದ ಪ್ರಚಾರ ಉತ್ಪ್ರೇಕ್ಷೆಯ ಬಗ್ಗೆ ಜುಗುಪ್ಸೆಯ್ನು ಕಾಣಬಹುದು. ಈ ಧೋರಣೆಗೆ ವಿರುದ್ಧವಾಗಿ ಪಕ್ಷದ ಪ್ರಣಾಳಿಕೆಯನ್ನೇ ಎತ್ತಿ ಹಿಡಿದವರೆಮದರೆ ಆಸ್ಟ್ರೋವ್‍ಸ್ಕಿ, ಕಟೌಯೆವ್ ಮತ್ತು ಇಲ್ಯಾ ಎರ್ಹೆನ್‍ಬರ್ಗ್. ಆಸ್ಟ್ರೋವ್‍ಸ್ಕಿಯ ಹೌ ಸ್ಟೀಲ್ ವಾಸ್ ಟೆಂಪರ್ಡ್ ಎಂಬ ಕದಂಬರಿಯಲ್ಲಿ ನಾಯಕ ಆದರ್ಶ ಕಮ್ಯೂನಿಸ್ಟ್, ಧಿರೋದಾತ್ತ ವ್ಯಕ್ತಿ. ಕಮ್ಯೂನಿಸ್ಟ್ ತತ್ತ್ವದ ವಿರುದ್ಧ ಬರೆದವರನ್ನು ನಿರ್ನಾಮ ಮಾಡಿದಾಗ ಹಲವು ಪ್ರಮುಖ ಬರೆಹಗಾರರು ಮೂಕ ವಿಸ್ಮಿತರಾದರು. ಇನ್ನು ಕೆಲವರು ಚರಿತ್ರೆಗೇ ಮಾಕ್ರ್ಸಿಸ್ಟ್ ಬಣ್ಣಬಳಿದು ಬರೆದರು. 
	ಎರಡನೆಯ ಮಹಾಯುದ್ಧ ಅದರಲ್ಲೂ ಜರ್ಮನರಿಂದ ರಷ್ಯದ ಆಕ್ರಮಣ ಸುಪ್ತ ರಾಷ್ಟ್ರ ಪ್ರೇಮವನ್ನು ಬಡಿದೆಬ್ಬಿಸಿತು. ಸ್ಟಾಲಿನ್ ಗ್ರಾಡ್ ಎಂಬ ಆಯಕಟ್ಟಿನ ನಗರವನ್ನು ವಶಪಡಿಸಿಕೊಳ್ಳಲು ಜರ್ಮನರು ಅವ್ಯಾಹತವಾಗಿ ನಡೆಸಿದ ದಾಳಿ, ರಷ್ಯನರು ಅವರನ್ನು ಎದುರಿಸಿದ ಪರಾಕ್ರಮ ಬೋರಿಸ್ ಗಾರ್ಬಟೋವ್‍ನ (1908 - 54) ಕಾದಂಬರಿಯಲ್ಲಿದೆ. ಹೀಗೆಯೇ ಜರ್ಮನ್ ಆಕ್ರಮಿತ ಪ್ರದೇಶಗಳಲ್ಲಿ ರಷ್ಯನ್ ಯುವಕ ಸಂಘದ ಭೂಗತ ಚಟುವಟಿಕೆಗಳು, ಗೆರಿಲ್ಲಾಯುದ್ಧಗಳನ್ನು ಕುರಿತ ಕಥೆ, ನಾಟಕಗಳು ಅಪಾರವಾಗಿವೆ.
	ಯುದ್ಧಾನಂತರದಲ್ಲಿ ಸ್ಟಾಲಿನ್ ತನ್ನ ಮುಷ್ಟಿಯನ್ನು ಬಿಗಿಗೊಳಿಸಿ ಸಾಹಿತ್ಯ ಪ್ರವೀಣ ಸ್ಡನೋವ್‍ನ ಸಲಹೆಯಂತೆ ಎಲ್ಲಾ ಕುಶಲತೆಗಳೂ ರಾಜಕೀಯಕ್ಕೆ, ಪಕ್ಷದ ಪ್ರಣಾಳಿಕೆಗೆ ಬದ್ಧವಾಗಿರಬೇಕೆಂದು ರೂಪಿಸಿದ. ಎಲ್ಲಾ ಕಲೆಗಳಲ್ಲಿ, ಬೌದ್ಧಿಕ ಪ್ರದರ್ಶನಗಳಲ್ಲಿ ಪಕ್ಷದ ಹಿಡಿತ ಬಿಗಿಯಾಗಿತ್ತು. ಯುದ್ಧಾನಂತರದ ರಾಷ್ಟ್ರ ನಿರ್ಮಾಣ, ಸೈನಿಕರ ಪುನರ್ವಸತಿ, ಪಶ್ಚಿಮ ಯೂರೋಪ್ ಹಾಗೂ ಅಮರಿಕ ಸಂಯುಕ್ತ ಸಂಸ್ಥಾನಗಳ ಬಗ್ಗೆ ದ್ವೇಷ ಇವು ಸಾಹಿತ್ಯದ ವಸ್ತುಗಳಾದವು. ಯುದ್ಧವನ್ನೇ ವಸ್ತುವಾಗಿರಿಸಿಕೊಂಡ ಬೋರಿಸ್ ಪೊಲೆವಾಯ್‍ನ (1908)ಎ ಸ್ಟೋರಿ ಅಬೌಟ್ ಎ ರಿಯಲ್ ಮ್ಯಾನ್ ಹಾಗೂ ಇಲ್ಯಾ ಎರ್ಹೆನ್‍ಬರ್ಗ್‍ನ ಸ್ಟಾರ್ಮ್ ಮುಖ್ಯವಾದವು. ಸಾಹಿತ್ಯದಲ್ಲಿ ಈ ದಶಕ ಬರಗಾಲವೆಂದೆನ್ನಬಹುದು.
	ಸ್ಟಾಲಿನ್‍ನ ನಿಧನ ರಷ್ಯದಲ್ಲಿ ಆಂದೋಳನವನ್ನೆಬ್ಬಿಸಿತು. ಅದುವರೆಗೂ ಮೂಕರಾಗಿದ್ದ ಜನ ಕಟು ವಿಮರ್ಶಕರಾದರು. 1953 ರ ಅನಂತರ ಬಂದ ಲಿಯೋನಿಡ್ ಜೋರಿನ್‍ನ ನಾಟಕ ದ ಗೆಸ್ಟ್‍ಸ್ ವರ್ಗರಹಿತ ಸಮಾಜ ಇಲ್ಲವೆಂದು ಪ್ರತಿಭಟಿಸಿದ. ಎರ್ಹೆನ್‍ಬರ್ಗ್‍ನ ತೋ (ನೀರ್ಗಲ್ಲು) ಎಂಬ ನಾಟಕದಲ್ಲಿ ಸ್ಟಾಲಿನ್ ಕಾಲದಲ್ಲಿ ಕಲಾಕಾರರ ದುರಂತವನ್ನು ಚಿತ್ರಿಸಿದ. ಆದರೂ ರಸಾಭಿಜ್ಞತೆಯನ್ನು ಮೆಟ್ಟಿ ನಿಂತಿತು ಕಮ್ಯೂನಿಸ್ಟ್ ಆದರ್ಶತತ್ತ್ವ. ಪಕ್ಷದ ಇಪ್ಪತ್ತನೆಯ ಸಮ್ಮೇಳನದಲ್ಲಿ ಕ್ರುಶ್ಚೇವ್ ಭಾಷಣ ಮಾಡಿ, ಸ್ಟಾಲಿನ್‍ನ ತಪ್ಪುಗಳನ್ನು ಬಯಲಿಗೆಳೆದು ಖಂಡಿಸಿ, ವ್ಯಕ್ತಿಪೂಜೆಯನ್ನು ಅಲ್ಲಗೆಳೆದ. ಇದರಿಂದ ಬರೆಹಗಾರರು ಸ್ಫೂರ್ತಿ ಹೊಂದಿ ಪದ್ಯ, ಕತೆ, ಕಾದಂಬರಿಗಳಲ್ಲಿ ಸೋವಿಯೆತ್ ಜೀವನದ ಅವಲಕ್ಷಣಗಳನ್ನು ಟೀಕಿಸಿ, ಪಕ್ಷದ ಎಲ್ಲವೂ ತನಗೆ ತಿಳಿದಿದೆಯೆಂಬ ಧೋರಣೆಯನ್ನು ಖಂಡಿಸಿದರು. ಇದು ಕಮ್ಯೂನಿಸಂ ಆದರ್ಶ ಮತ್ತು ಅನುಕರಣೀಯವೆಂಬ ಪ್ರಚಾರಕ್ಕೆ ವಿರುದ್ಧವಾಗಿತ್ತು. ಪಕ್ಷಕ್ಕೆ ಇದು ಸಹಿಸದೆ 1956 ರಲ್ಲಿ ಹಂಗೇರಿಯ ಕ್ರಾಂತಿಯ ಅನಂತರ ಬರೆಹಗಾರರ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ಹೇರಿತು.
	ರಷ್ಯದ ಸಾಧನೆಯನ್ನು ಪ್ರಶ್ನಿಸುವ ಹಾಗೂ ರಷ್ಯನ್ ಯುವ ಜನತೆಯ ನಿರಾಶೆಯನ್ನು ಪ್ರತಿಬಿಂಬಿಸುವ ಬೋರಿಸ್ ಪಾಸ್ಟರ್‍ನಾಕ್‍ನ ಕಾದಂಬರಿ ಡಾಕ್ಟರ್ ಜಿವಾಗೋ ಇಟಲಿಯಲ್ಲಿ ಪ್ರಕಟವಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪ್ರಶಂಸೆ ಪಡೆದರೂ ಅದನ್ನು ರಷ್ಯದಲ್ಲಿ ಖಂಡಿಸಲಾಯಿತು. ಸಮಗ್ರ ಲೇಖಕರ ಮೂರನೆಯ ಸಮ್ಮೇಳನದಲ್ಲಿ (1959) ಕ್ರುಶ್ಚೇವ್ ಕೆಲಸಗಾರರ ಕಮ್ಯೂನಿಸ್ಟ್ ಶಿಕ್ಷಣದಲ್ಲಿ ಪಕ್ಷಕ್ಕೆ ಹಾಗೂ ಸರಕಾರಕ್ಕೆ ಬರೆಹಗಾರರ ಬೆಂಬಲ ಕೋರಿದ. ಯೆವ್ವುಷೆಂಕೋ (1953) ಮತ್ತಿತರ ಯುವ ಬರೆಹಗಾರರು ಸ್ಟಾಲಿನ್ ತತ್ತ್ವಗಳ ನಿರ್ನಾಮಕ್ಕೆ ಕರೆಯಿತ್ತರು. ಆದರೆ ಪೂರ್ವಾಚಾರಪ್ರಿಯರು ಪ್ರಗತಿಪರ ಸುಧಾರಣೆಗಳಿಗೆ ಸಮ್ಮತಿಸದೆ ಇದನ್ನು ವಿರೋಧಿಸಿದರು. ಸೊಲ್ಜೆನಿಟ್ಸನ್‍ನ ಕಾದಂಬರಿಗಳು ಪಾಶ್ಚಾತ್ಯ ಜಗತ್ತಿನ ಗಮನವನ್ನು ಸೆಳೆದುಕೊಂಡವು (ಕ್ಯಾನ್ಸರ್‍ವಾರ್ಡ್ ಇತ್ಯಾದಿ).
	ಬರೆಹಗಾರರ ನಾಲ್ಕನೆಯ ಸಮ್ಮೇಳನದಲ್ಲಿ (1963) ಪ್ರಗತಿಪರರು ಹಿಮ್ಮೆಟ್ಟಿದರು. 1964 ರಲ್ಲು ಕ್ರುಶ್ಚೇವ್ ಪತನದ ಅನಂತರ ಬರೆಹಗಾರರ ಮೇಲೆ ನಿರ್ಬಂಧಗಳು ಬಿಗಿಗೊಂಡವು. ಸಾಹಿತ್ಯವು ಪಕ್ಷ ಹಿತಾಸಕ್ತಿಗಳಿಗೆ ಅನುಗುಣವಾಗಿರಬೇಕೆಂಬ ವಾದ ಬಲವಾಯಿತು. ಸಾಹಿತ್ಯದ ಪ್ರಕಾರ ಮತ್ತು ವಸ್ತು ನಿರೂಪಣೆಯಲ್ಲಿ ಮಾತ್ರ ಬರೆಹಗಾರರಿಗೆ ಸ್ವಾತಂತ್ರ್ಯವಿರುವುದೆಂದು ಸಾರಲಾಯಿತು. ಆದರೂ ಕೆಲವು ಪ್ರಗತಿಪರ ಬರೆಹಗಾರರು ಸಮಾಜವಾದದ ಯಥಾರ್ಥತೆಯಲ್ಲಿಲ್ಲದ ಸ್ವತಂತ್ರ ವಿಚಾರ ಧಾರೆಯನ್ನು ಆರಂಭಿಸಿದರು. 1966 ರಲ್ಲಿ ಇಬ್ಬರು ಸಾಮಾನ್ಯ ಬರೆಹಗಾರರು ಆಂದ್ರೆ ಸಿನ್ಯವ್‍ಸ್ಕಿ ಮತ್ತು ಯೂಲಿ ಡೇನಿಯಲ್, ರಷ್ಯದ ಹೊರಗಡೆ ಆಬ್ರಾಂ ಟೆಟ್ರ್ಸ್ ಮತ್ತು ನೊಕೋಲಾಯ್ ಆರ್ಜಕ್ ಎಂಬ ಕಾವ್ಯನಾಮಗಳಲ್ಲಿ ರಷ್ಯವನ್ನು ಮಿಥ್ಯಾಪವಾದದಿಂದ ಅವಮಾನಗೊಳಿಸಿದರೆಂಬ ದೂರಿನ ಮೇಲೆ ಸರ್ಕಾರ ಇವರನ್ನು ಬಂಧಿಸಿ ಸೆರೆಮನೆಯಲ್ಲಿಟ್ಟಿತು. ಈ ರೀತಿಯ ನಿರ್ಬಂಧಗಳಿಂದ ಸಾಹಿತಿಗಳಿಗೆ ವಿಚಾರ ಸ್ವಾತಂತ್ರ್ಯ ಮತ್ತು ಬರೆಹ ಸ್ವಾತಂತ್ರ್ಯವಿಲ್ಲದೆ ಸಾಹಿತ್ಯ ಸತ್ತ್ವಹೀನವಾಗಿ, ಏಕಮುಖವಾಗಿ, ಸ್ಫೂರ್ತಿರಹಿತವಾಗತೊಡಗಿತು. ಇತ್ತೀಚೆಗೆ ಗೊರ್ಬಚೇವ್‍ನ ಪೆರಿಸ್ತ್ರೋಯಿಕದ ಅನಂತರ ರಷ್ಯನ್ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಪ್ರಗತಿಪರ ಬದಲಾವಣೆಗಳು ಕಾಣಿಸಿಕೊಳ್ಳತೊಡಗಿದವು.
				                          (ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ